ರಾತ್ರಿ ನಿದ್ದೆ ಮಾಡಿದ್ರಾ..? ಸೊಳ್ಳೆ ಕಡೀತಾ..? : ಬಿಜೆಪಿಯವರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.19-ರಾತ್ರಿ ನಿದ್ದೆ ಮಾಡಿದ್ರಾ, ಇಲ್ಲವೆ ಜಾಗರಣೆ ಮಾಡಿದ್ರಾ, ಸೊಳ್ಳೆ ಕಡಿದವಾ, ಆರೋಗ್ಯ ಹೇಗಿದೆ? ಎಂದು ಯೋಗಕ್ಷೇಮ ವಿಚಾರಿಸಲು ಬಂದಿದ್ದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕೆಂದು ಪಟ್ಟು ಹಿಡಿದು ವಿಧಾನಸಭೆಯಲ್ಲೇ ಅಹೋರಾತ್ರಿ ಉಳಿದುಕೊಂಡಿರುವ ಬಿಜೆಪಿ ಶಾಸಕರನ್ನು ಇಂದು ಬೆಳಗ್ಗೆ ಭೇಟಿ ಮಾಡಿ, ಅವರೊಂದಿಗೆ ಉಪಹಾರ ಸೇವಿಸಿದ ನಂತರ ಉಪಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸದನದ ಒಳಗಿನ ವರ್ತನೆಗಳೇ ಬೇರೆ, ಸದನದ ಹೊರಗಿನ ನಡವಳಿಕೆಗಳೇ ಬೇರೆ. ಬಿಜೆಪಿಯಲ್ಲೂ ತಮಗೆ ಒಳ್ಳೆಯ ಸ್ನೇಹಿತರಿದ್ದಾರೆ. ರಾತ್ರಿ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಮಲಗಿದ್ದರು. ಹೀಗಾಗಿ ಅವರ ಆರೋಗ್ಯ ವಿಚಾರಿಸುವುದು ನಮ್ಮ ಕರ್ತವ್ಯ ಎಂದರು.

ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಬಿಜೆಪಿ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾತ್ರಿ ವಿಧಾನಸಭೆಯಲ್ಲೇ ಉಳಿದಿದ್ದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರ ಮನವೊಲಿಸುವ ಪ್ರಯತ್ನವನ್ನು ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಅವರು ಮಾಡಿದರು. ಆದರೂ ಪಟ್ಟು ಬಿಡದೆ ಶಾಸಕರು ವಿಧಾನಸಭೆಯಲ್ಲೇ ಉಳಿದಿದ್ದರು.

Facebook Comments

Sri Raghav

Admin