ಡಿಸಿಎಂ ಸಂಸ್ಕೃತಿಗೆ ತಿಲಾಂಜಲಿ ಇಡುತ್ತಾ ಹೈಕಮಾಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.31- ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬೆನ್ನಲ್ಲೇ ಇದೀಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.
ಇದರ ನಡುವೆಯೇ ಈ ಬಾರಿಯ ಸಚಿವ ಸಂಪುಟದಲ್ಲಿ ಬಿಜೆಪಿ ಹೈಕಮಾಂಡ್ ಯಾವುದೇ ಡಿಸಿಎಂ ನೇಮಕ ಮಾಡುವುದಿಲ್ಲ ಎಂದು ಹೇಳಿದೆ.  ಇದರ ಜೊತೆಗೆ ಬೊಮ್ಮಾಯಿ ಅವರು ಕೂಡ ಡಿಸಿಎಂ ಗಳ ನೇಮಕ ಮಾಡುವ ಸಂಸ್ಕೃತಿಗೆ ತಿಲಾಂಜಲಿ ಇಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿತ್ತು. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವವನ್ನು ಅಭಿವೃದ್ಧಿಪಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಯಡಿಯೂರಪ್ಪ ಅವರು ಹೊರಡುವ ಸಮಯ ಬಂದಾಗ ಡಿಸಿಎಂ ಸ್ಥಾನದಲ್ಲಿ ಇರುವವರು ಸಿಎಂ ಹುದ್ದೆಗೆ ಬರುತ್ತಾರೆ ಎಂಬ ಆಲೋಚನೆ ಇತ್ತು, ಆದರೆ ಅದು ಆಗಲಿಲ್ಲ ಎಲ್ಲಾ ಲೆಕ್ಕಾಚಾರ ತಲೆಕೆಳಗಾಯಿತು.

ಈ ಸಮಯದಲ್ಲಿ, ಅಂತಹ ಪರ್ಯಾಯ ನಾಯಕತ್ವದ ಅಗತ್ಯವಿಲ್ಲ ಎಂದು ಆರ್‍ಎಸ್‍ಎಸ್ ಜೊತೆ ನಿಕಟ ಸಂಪರ್ಕ ಹೊಂದಿರುವ ಪಕ್ಷದ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದರು ಎನ್ನಲಾಗಿದೆ. ಪ್ರಾದೇಶಿಕ, ಜಾತಿ ಮತ್ತು ಸಮುದಾಯದ ಸಮತೋಲನ ಸಾಧಿಸುವ ಉದ್ದೇಶದಿಂದ ಹಲವು ಸಮುದಾಯದ ನಾಯಕರನ್ನು ಡಿಸಿಎಂ ಮಾಡಲಾಗಿತ್ತು.
2019 ರಲ್ಲಿ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ಯಾವುದೇ ಡಿಸಿಎಂಗಳನ್ನು ಹೊಂದುವ ಆಲೋಚನೆಯನ್ನು ಅವರು ವಿರೋಧಿಸಿದ್ದರು. ಡಾ.ಸಿ.ಎನ್.ಅಶ್ವತ್ಥ ನಾರಾಯಣ್ (ಒಕ್ಕಲಿಗ) ಮತ್ತು ಲಕ್ಷ್ಮಣ ಸವದಿ( ಲಿಂಗಾಯತ) ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿತು.

ನಂತರ ಸಿಎಂ ಯಡಿಯೂರಪ್ಪ ತಮ್ಮ ಪರಮಾಪ್ತ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಪಟ್ಟು ಹಿಡಿದು ನೇಮಕ ಮಾಡಿಸಿದ್ದರು.
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ ಸಂಸ್ಕೃತಿಯನ್ನು ಪರಿಚಯಿಸಿದ್ದು ಕಾಂಗ್ರೆಸ್ ಪಕ್ಷವೇ. ವೀರಪ್ಪಮೊಯಿಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಆನಂತರ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ( 1994-99 ) ಮೊದಲ ಅವಧಿಗೆ ಜೆ.ಎಚ್. ಪಟೇಲ್ ಡಿಸಿಎಂ ಆಗಿದ್ದರು.

ಜೆ.ಎಚ್.ಪಟೇಲ್ ಸಿಎಂ ಆಗಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಆನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗ ಕಡ್ಡಾಯವಾಗಿ ಡಿಸಿಎಂ ಹುದ್ದೆ ಸೃಷ್ಟಿಯಾದವು. ಧರ್ಮಸಿಂಗ್ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದ ಆರಂಭವಾದ ಡಿಸಿಎಂ ಮೇನಿಯಾ ರಾಜ್ಯದಲ್ಲಿ ಮತ್ತೂ ಮುಂದುವರೆದಿದೆ.

ವಿಪರ್ಯಾಸವೆಂದರೆ ದೇಶದಲ್ಲಿ ಅತಿ ಹೆಚ್ಚು ಉಪ ಮುಖ್ಯಮಂತ್ರಿಗಳನ್ನು ಹೊಂದಿರುವ ರಾಜ್ಯ ಆಂಧ್ರ ಪ್ರದೇಶ. ಹಾಗೆ ನೋಡುವುದಾದರೆ ಭಾರತದಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಿದ್ದು ಕೂಡ ಆಂಧ್ರ ಪ್ರದೇಶದಲ್ಲೇ. ಟಿ.ಪ್ರಕಾಶ್ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿತ್ತು.

ನೀಲಂ ಸಂಜೀವರೆಡ್ಡಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ನೀಲಂ ಸಂಜೀವರೆಡ್ಡಿ ಅವರೇ ಸ್ವತಃ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಇದೊಂದು ಅನುಪಯುಕ್ತ ಹುದ್ದೆ ಎಂದು ಡಿಸಿಎಂ ಹುದ್ದೆಯನ್ನು ತೆಗೆದು ಹಾಕಿದ್ದರು. ಹಾಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಭಾವಿ ಸಮುದಾಯಗಳಿಗೆ ಒಬ್ಬೊಬ್ಬ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ.

Facebook Comments