ವಾಹನ ತೆರಿಗೆಯಲ್ಲಿ ರಾಜ್ಯಕ್ಕೆ 1 ಸಾವಿರ ಕೋಟಿ ರೂ. ನಷ್ಟ..!
ಬೆಂಗಳೂರು,ಜ.28- ವಾಹನಗಳ ನೋಂದಣಿಯಲ್ಲಿ ಕೇಂದ್ರ ಸರ್ಕಾರ ಒಂದು ರಾಷ್ಟ್ರ , ಒಂದೇ ತೆರಿಗೆ(ಒನ್ ನೇಷನ್ ಒನ್ ಟ್ಯಾಕ್ಸ್) ಜಾರಿಗೆ ತರಲು ನಿರ್ಧರಿಸಿದ್ದು, ಇದನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರೆ ಒಂದು ಸಾವಿರ ಕೋಟಿ ರೂ.ನಷ್ಟು ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ಬೆಲೆಯುಳ್ಳ ವಾಹನಗಳ ನೋಂದಣಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಗಳಲ್ಲೂ ಒಂದೇ ತೆರಿಗೆ ಇರಬೇಕು ಎಂದು ಹೇಳಿದೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಕಾನೂನು ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ರಾಜ್ಯದಲ್ಲಿ ಶೇ.16, ಶೇ.18 ಮತ್ತು 20ರಷ್ಟು ಮೂರು ಸ್ಲ್ಯಾಬ್ಗಳಲ್ಲಿ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಹಾಗೆಯೇ ಕೇಂದ್ರ ಸರ್ಕಾರವು ಶೇ.8, ಶೇ.12, ಶೇ.10ರಂತೆ ತೆರಿಗೆ ವಿಧಿಸಿದೆ.
ಕೇಂದ್ರ ಸರ್ಕಾರ ಏಕರೂಪದ ತೆರಿಗೆ ಜಾರಿಗೊಳಿಸುವು ದರಿಂದ ರಾಜ್ಯದ ತೆರಿಗೆ ಸಂಗ್ರಹದಲ್ಲಾಗುವ ವ್ಯತ್ಯಾಸದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡದ ಪ್ರಮಾಣವನ್ನು ಕೆಲವು ರಾಜ್ಯಗಳು ಇಳಿಸಿವೆ. ಅಪಘಾತಗಳಿಂದಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಂತರ ದಂಡದ ಬಗ್ಗೆ ತೀರ್ಮಾನಿಸು ವುದು ಸೂಕ್ತ ಎಂದರು.
ಸಮಿತಿ ರಚನೆಗೆ ಸೂಚನೆ: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆ ಹಲವು ವರ್ಷಗಳಿಂದಲೂ ಮಾಡಲಾಗುತ್ತಿದೆ. ಈ ಬಗ್ಗೆ ಸಮಿತಿ ರಚಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
1.30 ಲಕ್ಷ ಚಾಲಕ ಮತ್ತು ನಿರ್ವಾಹಕರು ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಸಂಸ್ಥೆಗಳ ನಿಗಮದಂತೆ ಸರ್ಕಾರದ ಇನ್ನು ಹಲವು ನಿಗಮಗಳಿದ್ದು, ಆ ನಿಗಮಗಳಿಂದಲೂ ಇದೇ ರೀತಿ ಬೇಡಿಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಸಂಪುಟ ರಚನೆ ಹೈಕಮಾಂಡ್ಗೆ ಬಿಟ್ಟಿದ್ದು: ಲಕ್ಷ್ಮಣ ಸವದಿ
ಬೆಂಗಳೂರು,ಜ.28- ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಬಗ್ಗೆ ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದವಾಗಿದ್ದು, ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಯಾರನ್ನು ಬಿಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ ಎಂದರು.
ಹಲವು ಸಚಿವರು ತಮ್ಮ ಸ್ಥಾನ ತ್ಯಾಗ ಮಾಡುವುದಾಗಿ ಹೇಳಿರುವುದು ಅವರ ವೈಯಕ್ತಿಕ ನಿರ್ಧಾರ. ತಾವೊಬ್ಬ ರಾಜಕಾರಣಿಯಾಗಿದ್ದು ಸನ್ಯಾಸಿಯಲ್ಲ. ಸಹಜವಾಗಿಯೇ ರಾಜಕೀಯ ಅಪೇಕ್ಷೆಗಳಿವೆ ಎಂದು ಹೇಳಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದರ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ದವಾಗಿರುವುದಾಗಿ ಸವದಿ ತಿಳಿಸಿದರು.