ವಿಧಾನಪರಿಷತ್‍ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಡಿಸಿಎಂ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ವಿಧಾನಸಭೆಯಿಂದ ವಿಧಾನಪರಿಷತ್‍ನ ಒಂದು ಸ್ಥಾನದ ಚುನಾವಣೆಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ವಿಧಾನಪರಿಷತ್‍ನ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಉಮೇದುವಾರಿಕೆಯ ನಾಮಪತ್ರ ಸಲ್ಲಿಸಿದರು.

ಲಕ್ಷ್ಮಣಸವದಿ ಅವರ ನಾಮಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ಸಚಿವರಾದ ಬಸವರಾಜಬೊಮ್ಮಾಯಿ, ಆರ್.ಅಶೋಕ್, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ, ಸಿ.ಸಿ.ಪಾಟೀಲ್, ಶಾಸಕರಾದ ಮಸಾಲ ಜಯರಾಂ, ಜ್ಯೋತಿಗಣೇಶ್, ಬೆಳ್ಳಿ ಪ್ರಕಾಶ್ ಸೂಚಕರಾಗಿದ್ದಾರೆ. ಎರಡು ಪ್ರತಿಗಳ ನಾಮಪತ್ರವನ್ನು ಸಲ್ಲಿಸಲಾಗಿದೆ.

ಅವಿರೋಧ ಆಯ್ಕೆ ವಿಶ್ವಾಸ: ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣಸವದಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅವಿರೋಧ ಆಯ್ಕೆಗೆ ಸಹಕಾರ ಕೊಡುತ್ತಾರೆಂಬ ನಿರೀಕ್ಷೆ ಇದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ವಿರೋಧ ಪಕ್ಷಗಳು ತಮ್ಮ ಆಯ್ಕೆಗೆ ಬೆಂಬಲ ನೀಡಲಿವೆ ಎಂಬ ನಿರೀಕ್ಷೆ ಇದೆ ಎಂದರು.

ವರಿಷ್ಠರು ತಮ್ಮನ್ನು ಸರ್ವಾನುಮದಿಂದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು, ಬಿಜೆಪಿಯ ಎಲ್ಲಾ ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉಪಮುಖ್ಯಮಂತ್ರಿಯಾಗಿ ಐದೂವರೆ ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದು, ಫೆ.19ರೊಳಗಾಗಿ ವಿಧಾನಸಭೆ ಅಥವಾ ವಿಧಾನಪರಿಷತ್‍ನ ಯಾವುದಾದರು ಒಂದು ಸದನದ ಸದಸ್ಯನಾಗಬೇಕಿದೆ. ಹೀಗಾಗಿ ವಿಧಾನಪರಿಷತ್‍ನ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ಗೊಂದಲಕ್ಕೆ ನಾಳೆ ಬೆಳಗ್ಗೆ ರಾಜಭವನದಲ್ಲಿ ನಡೆಯುವ ನೂತನ ಸಚಿವ ಪ್ರಮಾಣವಚನ ಕಾರ್ಯಕ್ರಮ ತೆರೆ ಎಳೆಯಲಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರವಾಗಿದ್ದು, ಅದರ ಬಗ್ಗೆ ಚರ್ಚೆ ಬೇಡ ಎಂದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಬಸವರಾಜಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸಪೂಜಾರಿ, ಶಾಸಕರಾದ ಪಿ.ರಾಜೀವ, ಉಮೇಶ್ ಕತ್ತಿ, ಅಭಯ ಪಾಟೀಲ್, ಮಹೇಶ್‍ಕುಮಟಳ್ಳಿ, ಶ್ರೀಮಂತಪಾಟೀಲ್, ಮಹಂತೇಶ್‍ದೊಡ್ಡಗೌಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments