ಬಜೆಟ್ ನಂತರ ವಾಹನ ಸವಾರರಿಗೆ ಬೀಳಲಿದೆ ಬಾರಿ ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ರಸ್ತೆ ಸುರಕ್ಷತಾ ಕಾಯ್ದೆಯಡಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ವಿಧಿಸುತ್ತಿರುವ ದಂಡ ಪ್ರಮಾಣವನ್ನು ಬಜೆಟ್ ಮಂಡನೆಯಾದ ಬಳಿಕ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಸಾರ್ವಜನಿಕರಿಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ದಂಡ ಪ್ರಮಾಣವನ್ನು ಇಳಿಕೆ ಮಾಡಲಾಗಿತ್ತು.

ಇದೀಗ ಬಜೆಟ್ ನಂತರ ಈ ಪ್ರಮಾಣವನ್ನ ಹೆಚ್ಚಳ ಮಾಡುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಕಾಯ್ದೆಯಡಿ ನಿಯಮಗಳನ್ನು ಉಲ್ಲಂಘಿಸಿದರೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ ಎಂದು ಜನರಿಗೆ ಮನವರಿಕೆಯಾಗುತ್ತಿದೆ. ನಮಗೆ ದಂಡ ವಿಧಿಸುವುದಕ್ಕಿಂತ ಹೆಚ್ಚಾಗಿ ಜನರ ಪ್ರಾಣ ಉಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ಈ ಬಗ್ಗೆ ಹಂತ ಹಂತವಾಗಿ ಜನ ಜಾಗೃತಿ ಮೂಡಿಸಲಾಗುವುದು ಎಂದರು. ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಸೇವಿಸಿ ಚಾಲನೆ ಮಾಡುವ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಕುರಿತು ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುತ್ತೇವೆ. ಸಾರ್ವಜನಿಕರೂ ಕೂಡ ಮದ್ಯ ಸೇವಿಸಿ ಚಾಲನೆ ಮಾಡುವುದಾಗಲಿ ಇಲ್ಲವೇ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಸಚಿವರು ಮನವಿ ಮಾಡಿದರು.

ಎಲೆಕ್ಟ್ರಿಕಲ್ ಬಸ್‍ಗಳ ಖರೀದಿ: ಎಲೆಕ್ಟ್ರಿಕಲ್ ಬಸ್‍ಗಳನ್ನು ಖರೀದಿಸುವ ಕುರಿತಂತೆ ಹಂಗೇರಿ ಸೇರಿದಂತೆ ನಾಲ್ಕೈದು ಕಂಪೆನಿಗಳು ಮುಂದೆ ಬಂದಿವೆ. ನಾವು ಖರೀದಿ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಟೆಂಡರ್ ಕರೆಯದೆ ಖರೀದಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು. ಟಾಟಾ, ಅಶೋಕ್ ಲೈಲ್ಯಾಂಡ್ ಮತ್ತು ವೋಲ್ವೊ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ಬಸ್ ನೀಡಲು ಮುಂದೆ ಬಂದಿವೆ. ನಿರ್ವಹಣೆ , ಖರೀದಿ ವೆಚ್ಚ ಸೇರಿದಂತೆ ಎಲ್ಲವನ್ನು ಕಂಪೆನಿಯವರೇ ಭರಿಸಲಿದ್ದಾರೆ. ದಿನ ಬಾಡಿಗೆ ಇಲ್ಲವೇ ಒಂದು ಕಿ.ಮೀ. ಗೆ ಇಂತಿಷ್ಟು ನೀಡಬೇಕೆಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ನಾವು ಇನ್ನೂ ಯಾವುದನ್ನೂ ಅಂತಿಮಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟು ವೆಚ್ಚದಲ್ಲಿ ಶೇ.60ರಷ್ಟು ರಾಜ್ಯ ಸರ್ಕಾರಕ್ಕೆ ಹಾಗೂ ಶೇ.40ರಷ್ಟು ಲಾಭಾಂಶವನ್ನು ಕಂಪೆನಿಯವರಿಗೆ ನೀಡಬೇಕು ಎಂಬ ಪ್ರಸ್ತಾವನೆ ಇದೆ. ಅಂತಿಮವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು. ಕಂಪನಿಯವರೇ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ನಮಗೆ ದರ ನಿಗದಿಪಡಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಮಹಾರಾಷ್ಟ್ರ, ಅಸ್ಸಾಂ, ಹರಿಯಾಣ ರಾಜ್ಯಗಳಲ್ಲಿ ಹೊಸ ಎಲೆಕ್ಟ್ರಿಕಲ್ ಬಸ್ ಖರೀದಿ ಬಗ್ಗೆ ಅಲ್ಲಿನ ಸರ್ಕಾರ ಯಾವ ತೀರ್ಮಾನ ಕೈಗೊಂಡಿದೆ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಸಾಧ್ಯವಾದರೆ ಅಧಿಕಾರಿಗಳ ಒಂದು ತಂಡ ಹಂಗೇರಿಗೂ ಭೇಟಿ ಕೊಡಲಿದೆ. ಅಂತಿಮವಾಗಿ ಸಾಧ್ಯಾಸಧ್ಯತೆ ಬಗ್ಗೆ ಒಮ್ಮತ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಬಸ್‍ಗಳ ಖರೀದಿ: ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಹುಬ್ಬಳ್ಳಿ ಮತ್ತು ಗುಲ್ಬರ್ಗ ವಿಭಾಗಕ್ಕೆ ಮಾರ್ಚ್ 31ರೊಳಗೆ 1200 ಬಸ್‍ಗಳನ್ನು ಖರೀದಿಸಲಿದ್ದೇವೆ. ಒಟ್ಟು ಮೂರು ಸಾವಿರ ಬಸ್‍ಗಳನ್ನು ಖರೀದಿಸಲು ತೀರ್ಮಾನಿಸಲಾಗಿತ್ತು. ಏಕಕಾಲದಲ್ಲಿ ಇಷ್ಟೊಂದು ಬಸ್‍ಗಳನ್ನು ನೀಡಲು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕಾಗಿ ಮೊದಲ ಹಂತದಲ್ಲಿ 1200 ಬಸ್‍ಗಳನ್ನು ನೀಡಲು ಕಂಪೆನಿಯವರು ಒಪ್ಪಿದ್ದಾರೆ. ಮಾ.31ರೊಳಗೆ ಬಸ್‍ಗಳು ರಸ್ತೆಗಿಳಿಯಲಿವೆ ಎಂದರು.

Facebook Comments