ಸಾರಿಗೆ ಸಂಸ್ಥೆಯಲ್ಲಿನ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಡಿಸಿಎಂ ಸವದಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.27-ಸಾರಿಗೆ ಸಂಸ್ಥೆಯಲ್ಲಿ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಮೊದಲು ಸೋರಿಕೆ ತಡೆಗಟ್ಟಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಕೋರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳಲ್ಲಿ ಸೋರಿಕೆಯಾಗುತ್ತಿರುವುದರಿಂದ ನಷ್ಟ ಉಂಟಾಗಿದೆ. ಇದು ಸರಿ ಹೋದರೆ ಬಸ್ ದರವನ್ನು ಹೆಚ್ಚಳ ಮಾಡುವ ಪ್ರಮೇಯ ಬರುವುದಿಲ್ಲ ಎಂದರು.

ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಗಮನ ನೀಡಬೇಕೆಂದು ಸೂಚನೆ ಕೊಡಲಾಗಿದೆ. ಅನೇಕ ವರ್ಷಗಳಿಂದ ಪ್ರಯಾಣದ ದರವನ್ನು ಏರಿಕೆ ಮಾಡಿರಲಿಲ್ಲ. ಸಂಸ್ಥೆ ನಷ್ಟದಲ್ಲಿದ್ದರೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ತೊಂದರೆ ಕೈಗೊಂಡಿದ್ದೆವು. ಈಗ ಅನಿವಾರ್ಯವಾಗಿದೆ ಎಂದು ಪರೋಕ್ಷವಾಗಿ ದರ ಹೆಚ್ಚಳ ಮಾಡಿರುವ ಬಗ್ಗೆ ಮಾಹಿತಿ ನೀಡಿದರು.

2014ರಲ್ಲಿ ಅಂದು ಪ್ರಯಾಣ ದರ ಹೆಚ್ಚಿಸಲಾಗಿತ್ತು. ಅಲ್ಲಿಂದೀಚೆಗೆ ದರ ಏರಿಕೆ ಮಾಡಿರಲಿಲ್ಲ. ನಿಗಮದ ನಷ್ಟವನ್ನು ಸರಿದೂಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದ್ದಾರೆ. ವಾಸ್ತವವನ್ನು ತಿಳಿದು ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಬೇಕೆಂದು ತಿರುಗೇಟು ನೀಡಿದರು.

ಯಾವ ಭಿನ್ನಾಭಿಪ್ರಾಯವೂ ಇಲ್ಲ: ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ. ಸಣ್ಣಪುಟ್ಟ ಗೊಂದಲಗಳಿದ್ದರೆ ವರಿಷ್ಠರು ಪರಿಹರಿಸಲು ಸಮರ್ಥರಿದ್ದಾರೆ. ಸಚಿವ ಸ್ಥಾನ ಇಲ್ಲವೇ ನಿರೀಕ್ಷಿತ ಸ್ಥಾನಗಳು ಸಿಗದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಅದನ್ನು ಬೇರೆ ಅರ್ಥದಲ್ಲಿ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಪಕ್ಷದಲ್ಲಿ ಕಿಂಚಿತ್ತೂ ಅಸಮಾಧಾನವಿಲ್ಲ. ಅವರೊಬ್ಬ ಪ್ರಶ್ನಾತೀತ ನಾಯಕರು. ಅವರ ಬಗ್ಗೆ ಹೈಕಮಾಂಡ್‍ಗೆ ಪರವಾಗಿ ಇಲ್ಲವೇ ವಿರುದ್ಧವಾಗಿ ಯಾರೊಬ್ಬರೂ ಪತ್ರ ಬರೆದಿಲ್ಲ ಎಂದರು.  ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲನಿಲ್ಲದ್ದೇವೆ. ಮುಂದಿನ ಅವಧಿವರೆಗೆ ಅವರ ನಾಯಕತ್ವಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಎಲ್ಲವನ್ನೂ ಮೆಟ್ಟಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಹೇಳಿದರು.

Facebook Comments