ಆರ್ಥಿಕ ಸಂಕಷ್ಟದಿಂದ ಸಾರಿಗೆ ನೌಕರರ ವೇತನ ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.3- ರಾಜ್ಯದಲ್ಲಿ ಈ ಬಾರಿ ಕೋವಿಡ್ ಬಂದ ಕಾರಣ ಸಾರಿಗೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನೌಕರರಿಗೆ ವೇತನ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿಂದು ಒಪ್ಪಿಕೊಂಡರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಎಚ್.ಡಿ.ರೇವಣ್ಣ ಅವರ ಪರವಾಗಿ ಎ.ಟಿ.ರಾಮಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಸಂಸ್ಥೆಯ 4 ನಿಗಮಗಳು ನಷ್ಟದಲ್ಲಿವೆ. ಸದ್ಯಕ್ಕೆ ನಮಗೆ ಬರುತ್ತಿರುವ ಆದಾಯದಲ್ಲಿ ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳಬಹುದೇ ಹೊರತು ನೌಕರರಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಇಲಾಖೆಯ ದುಸ್ಥಿತಿಯನ್ನು ಬಿಚ್ಚಿಟ್ಟರು.

ಕೋವಿಡ್ ಕಾರಣದಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಾವು ನಿಗಮಗಳಿಂದಲೂ ವೇತನ ನೀಡಲು ಸಾಧ್ಯವಾಗಲಿಲ್ಲ. ಸರ್ಕಾರವೇ 1760 ಕೋಟಿ ಹಣ ಬಿಡುಗಡೆ ಮಾಡಿತು. ಡಿಸೆಂಬರ್‍ನಲ್ಲಿ ಅರ್ಧ ವೇತನವನ್ನು ನೀಡಲಾಗಿದೆ. ಜನವರಿಯಲ್ಲಿ ಇನ್ನು ವೇತನವನ್ನು ಕೊಟ್ಟಿಲ್ಲ ಎಂದು ತಿಳಿಸಿದರು.

Facebook Comments