ಮಂಗಳೂರಿನ ಈ ಪರಿಸ್ಥಿತಿಗೆ ಖಾದರ್ ಹೇಳಿಕೆಯೇ ಕಾರಣ : ಡಿಸಿಎಂ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.20- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪರಿಸ್ಥಿತಿಗೆ ಮಾಜಿ ಸಚಿವ ಯು.ಟಿ.ಖಾದರ್ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಹೊತ್ತಿ ಉರಿಯುತ್ತದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಇದರಿಂದ ಪ್ರೇರಿಪಿತಗೊಂಡ ಕೆಲವು ಯುವಕರು ಗಲಭೆ ನಡೆಸಿದ್ದಾರೆ ಎಂದು ದೂರಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸಾರ್ವಜನಿಕರನ್ನು ಪ್ರಚೋದನೆಗೆ ತುತ್ತಾಗುವಂತೆ ಹೇಳಿಕೆಗಳನ್ನು ಕೊಡಬಾರದು. ಈಗ ಆಗಿರುವ ನಷ್ಟಕ್ಕೆ ಯಾರೂ ಹೊಣೆ ಎಂದು ಪ್ರಶ್ನಿಸಿದರು.  ಖಾದರ್ ಪ್ರಚೋದನಕಾರಿ ಹೇಳಿಕೆಯಿಂದ ಎಲ್ಲ ಸಮುದಾಯದವರಲ್ಲೂ ತಪ್ಪು ಸಂದೇಶ ರವಾನೆಯಾಗಿದೆ. ಮುಂದೆ ಯಾರೊಬ್ಬರೂ ಇಂತಹ ಹೇಳಿಕೆಗಳನ್ನು ನೀಡಬಾರದು. ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಸವದಿ ಮನವಿ ಮಾಡಿದರು.

ರಾಜ್ಯದಲ್ಲಿ ಶಾಂತಿ ನೆಲಸಲು ಎಲ್ಲರೂ ಕೈ ಜೋಡಿಸಬೇಕು. ಈ ಕಾಯ್ದೆಯನ್ನು ಜಾರಿ ಮಾಡಿರುವ ಉದ್ದೇಶವೇ ರಾಷ್ಟ್ರದ ಏಕತೆಗಾಗಿ. ಕಾಯ್ದೆ ಬಗ್ಗೆ ಕೆಲವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ತುಪ್ಪ ಸುರಿಯುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಕಾನೂನು ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿದರೆ ಅದಕ್ಕೆ ಆಕ್ಷೇಪವಿಲ್ಲ. ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಪ್ರತಿಭಟನೆ ನಡೆಸುವುದು ಸರಿಯೇ ಎಂದರು. ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಸಾರಿಗೆ ವಾಹನಗಳ ಮೇಲೆ ಕಲ್ಲು ಎಸೆಯುವುದು, ಹಾನಿ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಮಾಡಬಾರದು. ವಾಹನಗಳು ಹಾನಿಗೊಳಗಾದರೆ ಸಾರ್ವಜನಿಕರ ಆಸ್ತಿ ನಷ್ಟವಾಗುತ್ತದೆ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದೆಂದು ಮನವಿ ಮಾಡಿದರು.

ರೈಲಿನ ಮೇಲೆ ದಾಳಿ ನಡೆಸಿದರೆ ಗುಂಡು ಹಾರಿಸುವಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಆವೇಷದಲ್ಲಿ ಅವರು ಈ ರೀತಿ ಹೇಳಿರಬಹುದು. ಅದಕ್ಕೆ ಹೆಚ್ಚಿನ ಮಹತ್ವ ಕೊಡುವುದು ಬೇಡ ಎಂದು ಹೇಳಿದರು.

Facebook Comments