ಇಂದಿರಾ ಕ್ಯಾಂಟೀನ್ ಮುಚ್ಚಲ್ಲ, ಅವ್ಯವಸ್ಥೆ ಸರಿಪಡಿಸ್ತೀವಿ : ಡಿಸಿಎಂ ಅಶ್ವಥ್‍ ನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.28- ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುತ್ತಿರುವ ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ. ಆದರೆ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ನಿವಾಸದ ಬಳಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂದಿರಾ ಕ್ಯಾಂಟೀನ್‍ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ.

ಊಟ ಕೊಡುತ್ತಿರುವುದಕ್ಕೂ ನೀಡಿರುವ ಲೆಕ್ಕಾಚಾರಗಳಿಗೂ ತಾಳೆಯಾಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಸಂಶಯ ಮೂಡಿದೆ. ಹೀಗಾಗಿ ತನಿಖೆಗೆ ಮುಂದಾಗಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಇಂದಿರಾ ಕ್ಯಾಂಟೀನ್ ಮೂಲಕ ಎಲ್ಲರಿಗೂ ಗುಣಮಟ್ಟದ ಆಹಾರ ಸಿಗಬೇಕೆಂಬುದು ನಮ್ಮ ಆಶಯ. ಇದಕ್ಕಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರವೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಈ ಕ್ಯಾಂಟೀನ್‍ಗಳಿಗೆ ಹಣ ನೀಡಿರಲಿಲ್ಲ. ಈಗ ನಮ್ಮ ಮೇಲೆ ಗೂಬೆ ಕೂರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾವು ಅವ್ಯವಹಾರಗಳನ್ನು ಬಯಲಿಗೆಳೆದು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಪ್ರತಿಪಕ್ಷಗಳು ಕ್ಯಾಂಟೀನ್ ಮುಚ್ಚಲಾಗುತ್ತದೆ ಎಂಬ ಸುಳ್ಳು ಆರೋಪ ಮಾಡುತ್ತಿವೆ. ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

Facebook Comments