ಯಾರದೋ ದೇಹ ಇನ್ಯಾರಿಗೂ ನೀಡಿದರು, ಕುಂದಾಪುರದಲ್ಲೊಂದು ಕೊರೊನಾ ಯಡವಟ್ಟು..!
ಕುಂದಾಪುರ,ಆ.23- ಕೊರೊನಾ ಹೆಸರಲ್ಲಿ ಬೇರೆ ಬೇರೆ ಅವಾಂತರಗಳು ನಡೆಯುತ್ತಿದೆ. ಕೋವಿಡ್ನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ ಮೃತ ವ್ಯಕ್ತಿಯ ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಅಂಬುಲೆನ್ಸ್ನಲ್ಲಿ ಬಂದ ಬೇರೆ ಶವವನ್ನು ಕಂಡು ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ನೇರಂಬಳ್ಳಿಯ 60ರ ಹರೆಯದ ವ್ಯಕ್ತಿಯೊಬ್ಬರು ಮೃತರಾಗಿದ್ದ ಸುದ್ದಿಯನ್ನು ಕುಟುಂಬಕ್ಕೆ ಇಂದು ಬೆಳಿಗ್ಗೆ ನೀಡಲಾಗಿತ್ತು. ಮೃತ ವ್ಯಕ್ತಿಯ ಶರೀರವನ್ನು ಕಳುಹಿಸಿಕೊಡಲಾಗುವುದು ಎಂದು ಮನೆಯವರಿಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು.
ಶವವನ್ನು ಕುಂದಾಪುರ ಸ್ಮಶಾನಕ್ಕೆ ತರಲು ಕೋರಿಕೊಂಡಿದ್ದು ಮನೆಯವರು, ಬಂಧುಗಳು, ಊರವರು ಅಂತ್ಯಕ್ರಿಯೆಗೆ ಬೇಕಾದ ಸಿದ್ದತೆ ಮಾಡಿಕೊಂಡು ಸ್ಮಶಾನಕ್ಕೆ ತೆರಳಿದ್ದರು. ಆಶ್ಚರ್ಯವೆಂದರೆ ಬೆಳಿಗ್ಗೆ 10.30ಕ್ಕೆ ಬೇರೆ ವ್ಯಕ್ತಿಯ ಮೃತ ಶರೀರವನ್ನು ಸ್ಮಶಾನಕ್ಕೆ ರವಾನಿಸಲಾಗಿತ್ತು.
ನೇರಂಬಳ್ಳಿಯ ಮೃತ ವ್ಯಕ್ತಿ ಸುಮಾರು ಆರು ಅಡಿ ಎತ್ತರದ ವ್ಯಕ್ತಿಯಾಗಿದ್ದು, ಮನೆಯವರಿಗೆ ಮೃತದೇಹ ಕಂಡಾಕ್ಷಣ ಇದು ನಮ್ಮ ಮನೆಯವರ ಮೃತ ದೇಹ ಅಲ್ಲವೆಂಬ ಸಂದೇಹ ವ್ಯಕ್ತವಾಗಿತ್ತು.
ಓಪನ್ ಮಾಡಬಾರದು ಎಂಬ ಒತ್ತಡದ ನಡುವೆಯೂ ಏನಾದರಾಗಲಿ ಎಂದು ಶವ ಪರೀಕ್ಷಿಸುವಾಗ ಯುವಕನೊಬ್ಬನ ಶವವನ್ನು ಆಸ್ಪತ್ರೆಯವರು ಕಳುಹಿಸಿದ್ದು ಕಂಡು ಬಂದಿತ್ತು. ಇದು ನಮ್ಮ ಮೃತದೇಹ ಅಲ್ಲವೆನ್ನುತ್ತಿದ್ದಂತೆ ಅಂಬುಲೆನ್ಸ್ ಸಿಬ್ಬಂದಿಗಳು ಶವ ಕೊಂಡುಹೋಗಲು ಯತ್ನಿಸಿದ್ದರು.
ತಕ್ಷಣ ಸ್ಮಶಾನದ ಗೇಟ್ ಹಾಕಿದ ಜನರು ಯಾರದ್ದೋ ಶವ ಕಳುಹಿಸುವ ಈ ರೀತಿಯ ಯಡವಟ್ಟು ಕೆಲಸ ಮಾಡಿದ ಅಕಾರಿಗಳ ನಿರ್ಲಕ್ಷ್ಯ ಸರಿಯಲ್ಲ, ನಮ್ಮ ಮೃತದೇಹ ತಂದು ಕೊಡುವವರೆಗೆ ಈ ದೇಹವನ್ನು ಹೊರ ಹೋಗಲು ಬಿಡಲ್ಲ ಎಂದು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ಆರಂಭಿಸಿದರು.
ನೇರಂಬಳ್ಳಿಯ ನಾಗರಾಜ ಆಚಾರ್ಯ, ಪ್ರಕಾಶ್ ಆಚಾರ್ಯ, ಅಣ್ಣಪ್ಪ ಶೇರಿಗಾರ್ ನೇರಂಬಳ್ಳಿ, ಗೋಪಾಲ್ ಶೇರಿಗಾರ್ ನೇರಂಬಳ್ಳಿ, ಶ್ರೀಧರ ಆಚಾರ್ಯ ವಡೇರಹೋಬಳಿ, ರಾಜಗೋಪಾಲ್ ಆಚಾರ್ಯ ಕೊಟೇಶ್ವರ, ಊರಿನ ಪ್ರಮುಖರು, ಮೃತ ವ್ಯಕ್ತಿಗಳು ಬಂಧುಗಳು ಹಾಗೂ ಇನ್ನಿತರರು ಸ್ಥಳದಲ್ಲಿದ್ದು ಆಸ್ಪತ್ರೆಯವರ ಹಾಗೂ ಅಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕೊನೆಗೆ ಆಸ್ಪತ್ರೆಯವರು ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು ಮೃತ ವ್ಯಕ್ತಿಯ ಶವ ಕಳುಹಿಸಲು ಒಪ್ಪಿಕೊಂಡು ಮತ್ತೊಂದು ಅಂಬುಲೆನ್ಸ್ನಲ್ಲಿ ಶವ ಕಳುಹಿಸಿದರು. ನಂತರವೇ ಜನರು ಮೊದಲು ಬಂದಿದ್ದ ಅಂಬುಲೆನ್ಸ್ ಗೆ ತೆರಳಲು ಅವಕಾಶ ನೀಡಿದರು. ಕೊನೆಗೆ ನೇರಂಬಳ್ಳಿ ವ್ಯಕ್ತಿಯ ಶವದ ಅಂತ್ಯಕ್ರಿಯೆ ನಡೆಸಲಾಯಿತು.
ಉಡುಪಿಯಲ್ಲಿ ಮೊನ್ನೆಯಷ್ಟೇ ತಲೆನೋವು ಎಂದು ಆಸ್ಪತೆಗೆ ಬಂದ ಮಹಿಳೆಗೆ ಇಂಜೆಕ್ಷನ್ ನೀಡಿದ್ದು ಮನೆಗೆ ಹೋದ ಮಹಿಳೆ ಗಂಭೀರ ಹಂತಕ್ಕೆ ತಲುಪಿದ್ದರು. ಅದೇ ಆಸ್ಪತ್ರೆಗೆ ಹಿಂದಕ್ಕೆ ಕರೆತರುವಾಗ ಆಕೆ ಮೃತಳಾಗಿದ್ದಳು. ಆಕೆ ಅ.21ರಂದು ಆಸ್ಪತೆಗೆ ಬಂದಿದ್ದರೂ 20ಕ್ಕೆ ಟೆಸ್ಟ್ ಮಾಡಲಾಗಿದ್ದು ಆಕೆಗೆ ಪಾಸಿಟಿವ್ ಎಂದು ರಿಪೋರ್ಟ್ ನೀಡಿದ ಬಗ್ಗೆ ಗಲಭೆ ನಡೆದಿತ್ತು. ಒಟ್ಟಿನಲ್ಲಿ ಕೋವಿಡ್ನಿಂದ ಏನೆಲ್ಲ ಅವಾಂತರಗಳು ಸೃಷ್ಟಿಯಾಗಲಿದೆಯೋ ಅರ್ಥವಾಗುತ್ತಿಲ್ಲ.