ಸೋಂಕು ತಗ್ಗಿದರು, ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಯಥಾ ಪ್ರಕಾರ ಮುಂದುವರೆದಿದ್ದು, ಶೇ. 12.4ರಷ್ಟಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ ಕಡಿಮೆ ಮಾಡುವತ್ತ ಸರ್ಕಾರ ಗಮನ ಹರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಒಂದು ಲಕ್ಷ ಟೆಸ್ಟ್ ನಡಿತಿದೆ. ಹೀಗಾಗಿ ಕೇಸ್ ಹೆಚ್ಚಳ ಕಾಣುವ ಸಾದ್ಯತೆ ಇದೆ ಎಂದರು.

ಪಾಸಿಟಿವಿಟಿ ಸಂಖ್ಯೆ ಶೇ.5 ಕ್ಕಿಂತ ಕಡಿಮೆ ಮಾಡುವ ಗುರಿ ಇದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೇಸ್ ಹೆಚ್ವಳ ಆಗಿಲ್ಲ. ನಿನ್ನೆ, ಮೊನ್ನೆ ಕೋವಿಡ್ ಪ್ರಕರಣಗಳ ಏರಿಕೆ ಗಣನೀಯವಾಗಿ ಆಗಿಲ್ಲ. ಪ್ರಕರಣಗಳಿಗಿಂತ ನಾವು ಪಾಸಿಟಿವಿಟಿ ರೇಟ್ ನತ್ತ ಗಮನ ನೀಡಬೇಕು ಎಂದು ಅವರು ಹೇಳಿದರು.

ಇದಕ್ಕಾಗಿಯೇ ಮುಖ್ಯಮಂತ್ರಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇಸ್ ಇಳಿಕೆ ಕಂಡು ಬರಿತಿದೆ. ಕೇಸ್ ಗಳ ಏರುಪೇರು ಇದ್ದರೂ, ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಪ್ರತಿ ದಿನ ಸಾವಿನ ಸಂಖ್ಯೆ 450 ದಾಟುತ್ತಿದೆ. ಐಸಿಯು, ವೆಂಟಿಲೇಟರ್ ನಲ್ಲಿ ಇರುವ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಇದೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಿದರು.

ಇನ್ನೊಂದು ವಾರದ ನಂತರ ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ಶಿಕ್ಷಣ ಸಚಿವರು ನನ್ನನ್ನು ಕರೆದು ಸಭೆ ನಡೆಸಬಹುದು. ಆದರೆ ಇಂದು ಸಭೆಯಲ್ಲಿ ಭಾಗಿ ಆಗಲು ಸಾಧ್ಯವಿಲ್ಲ. ತಾಂತ್ರಿಕ ಸಲಹಾ ಸಮಿತಿ ಜತೆ ಕೂಡ ನಾನು ಈ ಕುರಿತು ಚರ್ಚೆ ನಡೆಸಲಿದ್ದೇನೆ ಎಂದರು.

ಸರ್ಕಾರಕ್ಕೆ ವಿದ್ಯಾರ್ಥಿಗಳ ರಕ್ಷಣೆ ಆದ್ಯ ಕರ್ತವ್ಯ. ವಿದ್ಯಾರ್ಥಿಗಳ ರಕ್ಷಣೆ ನಂತರ ಪರೀಕ್ಷೆ ವಿಚಾರ ಎಂದ ಅವರು, ಖುದ್ದು ಪ್ರಧಾನಿಗಳೇ ಪರೀಕ್ಷೆ ರದ್ದು ಪಡಿಸಿದ್ದಾರೆ. ಸಿಬಿಎಸ್ ಇ, ಐಸಿಎಸ್ ಇ ಪರೀಕ್ಷೆ ರದ್ದು ಪಡಿಸಿದ್ದಾರೆ. ಆ ಎರಡು ಸಿಲೆಬಸ್ ಗಳಿಗೆ ಮೌಲ್ಯಮಾಪನ ಸುಲಭ. ಸೆಮಿಸ್ಟರ್ ಲೆಕ್ಕದಲ್ಲಿ ಮೌಲ್ಯಮಾಪನ ನಡೆಯುತ್ತೆ. ಆದರೆ ನಮಗೆ ಆ ಅವಕಾಶ ಇರೋದಿಲ್ಲ. ಪರೀಕ್ಷೆ ಇಲ್ಲದೆ ಎಲ್ಲರನ್ನು‌ ಪಾಸ್ ಮಾಡಿದರೆ ತೊಂದರೆ ಆಗುತ್ತದೆ. ಮೌಲ್ಯಮಾಪನ ಹೇಗೆ ನಡೆಸಬೇಕು ಅನ್ನೊ ಚರ್ಚೆ ಆಗಬೇಕು ಎಂದು ಅವರು ಹೇಳಿದರು.

ದೇಶದಲ್ಲೇ ಅತಿ ಹೆಚ್ಚು ಲಸಿಕೆ ಪಡೆದ ಹೆಗ್ಗಳಿಕೆ ಒಳಪಟ್ಟ ಬೆಂಗಳೂರು. ಬೆಂಗಳೂರಿನಲ್ಲಿ ಒಂದು ಕೋಟಿಗೂ ಜನರಿದ್ದಾರೆ. ಶೇ.28 ರಷ್ಟು ಮಂದಿ ಗೆ ಲಸಿಕೆ ನೀಡಲಾಗಿದೆ. ಇದಕ್ಕಾಗಿ ನಾನು ಸರ್ಕಾರವನ್ನು, ವಿಶೇಷವಾಗಿ ಸಿಎಂ ರನ್ನು ಅಭಿನಂದಿಸುತ್ತೇನೆ. ಕೋವಿಡ್ ಗೆ ಮಕ್ಕಳು, ಪೋಷಕರು ಹೆದರುವ ಅವಶ್ಯಕತೆ ಇಲ್ಲ. ಮಕ್ಕಳಿಗೆ ಕೋವಿಡ್ ಅಂತಹ ದೊಡ್ಡ ಮಟ್ಟದ ಪ್ರಭಾವ ಬೀರುವುದಿಲ್ಲ.

ಕೋವಿಡ್ ನಿಂದ ಮಕ್ಕಳಲ್ಲಿ ಭೀಕರತೆ ಕಂಡಿಲ್ಲ, ಜ್ವರದಂತಹ ಲಕ್ಷಣಗಳು ಗೋಚರಿಸಿ ಬಹುಬೇಗ ಗುಣಮುಖ ರಾಗುತ್ತಾರೆ. ಆದರೆ ಮುನ್ನೆಚ್ಚರಿಕೆ ಇರಲಿ.ಪೋಷಕರು ಹೆದರಿಕೊಳ್ಳುವ ಅಗತ್ಯವಿಲ್ಲವೆಂದು ಸುಧಾಕರ್ ತಿಳಿಸಿದರು.

Facebook Comments