ಕಿಲ್ಲರ್ ಕೊರೊನಾಗೆ 7,000 ಬಲಿ, 1.80 ಲಕ್ಷ ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.17- ವಿನಾಶಕಾರಿಯಾಗಿ ಪರಿಣಮಿಸಿರುವ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ 7,000ಕ್ಕೂ ಹೆಚ್ಚು ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕು ಪೀಡಿತರ ಸಂಖ್ಯೆ 1.80 ಲಕ್ಷ ಸಮೀಪಿಸುತ್ತಿದೆ.  ಜಗತ್ತಿನ 150ಕ್ಕೂ ಹೆಚ್ಚು ದೇಶಗಳಲ್ಲಿ ಈ ಹೊಸ ವೈರಾಣು ಸೋಂಕಿನಿಂದ ಲಕ್ಷಾಂತರ ಮಂದಿ ಬಾಧಿತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ವಿಶ್ವದ ಅನೇಕ ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಸಾವು-ನೋವಿನ ಹೊಸ ಹೊಸ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ನೀಡಿರುವ ಮಾಹಿತಿ ಪ್ರಕಾರ ನಿನ್ನೆ ಬೆಳಗ್ಗೆಯಿಂದ ಈವರೆಗೆ ವಿವಿಧ ದೇಶಗಳಲ್ಲಿ ಸುಮಾರು 12,000 ಕೊರೊನಾ ಕೇಸ್‍ಗಳು ವರದಿಯಾಗಿದೆ.

ಚೀನಾ (ಈವರೆಗಿನ ಸಾವಿನ ಸಂಖ್ಯೆ 3,220) ನಂತರ ಅತಿ ಹೆಚ್ಚು ಸಾವು ಸಂಭವಿಸಿರುವ ದೇಶಗಳೆಂದರೆ ಇಟಲಿ (2,160), ಇರಾನ್ (855), ಸ್ಪೇನ್ (310). ಅಲ್ಲದೆ ಏಷ್ಯಾ, ಅಮೆರಿಕ, ಯೂರೋಪ್, ಆಫ್ರಿಕಾ ಖಂಡಗಳು, ಮತ್ತು ಮಧ್ಯಪ್ರಾಚ್ಯ-ಕೊಲ್ಲಿ ಪ್ರಾಂತ್ಯಗಳ ಅನೇಕ ದೇಶಗಳಲ್ಲಿಯೂ ಸಾವು-ನೋವು ವರದಿಯಾಗುತ್ತಿದೆ.ಕೋವಿಡ್-18 ಸೋಂಕು ಇನ್ನೂ ಕೆಲವು ದೇಶಗಳಿಗೂ ಹಬ್ಬುತ್ತಿದ್ದು, ಜನರು ಮತ್ತಷ್ಟು ಭಯಬೀತರಾಗಿದ್ದಾರೆ.

ಚೀನಾದ ಹೆಬೀ ಪ್ರಾಂತ್ಯದ ವುಹಾನ್ ನಗರದಲ್ಲಿ ಡಿಸೆಂಬರ್‍ನಲ್ಲಿ ಕಾಣಿಸಿಕೊಂಡ ಈ ಮಾರಕ ವೈರಾಣು ಸೋಂಕು ಕ್ರಮೇಣ ವಿಶ್ವದ ಅನೇಕ ರಾಷ್ಟ್ರಗಳಿಗೂ ಹಬ್ಬಿದ್ದು, ಸಾವಿನ ಸರಣಿ ಮುಂದುವರಿಯುತ್ತಲೇ ಇದೆ. ಸಮಾಧಾನಕರ ಸಂಗತಿ ಎಂದರೆ ಈ ಪಿಡುಗು ಕಾಣಿಸಿಕೊಂಡಿದ್ದು, ಈವರೆಗೆ 68,000ಕ್ಕೂ ಹೆಚ್ಚು ಜನರು ಚೇತರಿಸಿಕೊಳ್ಳುತ್ತಿದ್ದಾರೆ.

Facebook Comments