ರೈಲಿಗೆ ಸಿಕ್ಕಿ ವ್ಯಕ್ತಿ ಸಾವು : ಛಿದ್ರ ಛಿದ್ರಗೊಂಡ ದೇಹ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜು.11- ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿದ್ದು, ದೇಹ ಛಿದ್ರ ಛಿದ್ರವಾಗಿದೆ. ಮಧ್ಯರಾತ್ರಿ ಯಾವುದೋ ರೈಲಿಗೆ ಸಿಕ್ಕಿ ಮೃತಪಟ್ಟಿರುವ ವ್ಯಕ್ತಿಯ ದೇಹ ಸುಮಾರು 200 ಮೀಟರ್‍ನಷ್ಟು ದೂರ ಹೋಗಿ ಬಿದ್ದಿದೆ.  ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಕಾಪೆಫೋರೇಟರ್ ವಿಷ್ಣುವರ್ಧನ್ ಎಂಬುವರು ಮೃತ ದೇಹ ಗಮನಿಸಿ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ.

ರೈಲ್ವೆ ಸಬ್‍ಇನ್‍ಸ್ಪೆಕ್ಟರ್ ಕಾಂತರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 55 ವರ್ಷದಂತೆ ಕಾಣುವ ಈ ವ್ಯಕ್ತಿ ಕೋಲುಮುಖ, ನೀಳವಾದ ದೇಹ ಹೊಂದಿದ್ದು ವಾರಸುದಾರರು ಕೂಡಲೇ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಮೂರು ದಿನಗಳಿಂದ 5 ಶವ ಪತ್ತೆ:
ಕಳೆದ ಮೂರು ದಿನಗಳಿಂದೀಚೆಗೆ ರೈಲಿಗೆ ಸಿಕ್ಕಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ. ಹಿರೇಹಳ್ಳಿ, ಉಪ್ಪಾರಹಳ್ಳಿ, ಶೆಟ್ಟಿಹಳ್ಳಿ, ಅಂಡರ್‍ಪಾಸ್ ಗುಬ್ಬಿ ಸಮೀಪ ರೈಲಿಗೆ ಸಿಕ್ಕಿ ಐದು ಮಂದಿ ಮೃತಪಟ್ಟಿದ್ದಾರೆ.  ಇವರ ಪೈಕಿ ಇಬ್ಬರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಉಳಿದ ಮೂರು ಶವಗಳ ವಾರಸುದಾರರು ಪತ್ತೆಯಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ರೈಲಿಗೆ ಸಿಕ್ಕಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಕಡೆ ವೈಯಕ್ತಿಕ ಕಾರಣದಿಂದ ರೈಲಿಗೆ ಸಿಕ್ಕಿ ಮೃತಪಟ್ಟರೆ, ಮತ್ತೊಂದೆಡೆ ಮೊಬೈಲ್‍ಗಳಲ್ಲಿ ಮಾತನಾಡಿಕೊಂಡು ತಮ್ಮನ್ನು ತಾವೇ ಮರೆತು ವೇಗವಾಗಿ ಬರುವ ರೈಲಿಗೆ ಸಿಕ್ಕಿ ಸಾವನ್ನಪ್ಪುತ್ತಿರುವುದು ವಿಷಾದಕರ.

ಸ್ಕೈವಾಕ್ ನಿರ್ಮಾಣಕ್ಕೆ ಒತ್ತಾಯ: ಶೆಟ್ಟಿಹಳ್ಳಿಯಲ್ಲಿ ಅಂಡರ್‍ಪಾಸ್ ನಿರ್ಮಾಣ ಮಾಡಿರುವುದು ಅವೈಜ್ಞಾನಿಕವಾಗಿದೆ. ಹಾಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಬಹುತೇಕ ಮಂದಿ ಅಂಡರ್‍ಪಾಸ್‍ನ್ನು ಬಳಸದೆ ರೈಲ್ವೆಹಳಿ ದಾಟುಹೋಗುತ್ತಿರುವುದು ಸಾಮಾನ್ಯವಾಗಿದೆ.

ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ನಾಗರಿಕರ ಹಿತದೃಷ್ಟಿಯಿಂದ ಸ್ಕೈವಾಕ್ ನಿರ್ಮಾಣ ಮಾಡಿದರೆ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

Facebook Comments