ಪತ್ನಿ ಮೇಲಿನ ಕೋಪಕ್ಕೆ ತನ್ನಿಬ್ಬರು ಮಕ್ಕಳನ್ನು ಕೊಂದಿದ್ದ ತಂದೆಗೆ ಗಲ್ಲು ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21- ತೊರೆದು ಹೋದ ಪತ್ನಿ ಮೇಲಿನ ಕೋಪಕ್ಕೆ ತನ್ನ ಎರಡು ಮಕ್ಕಳನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯೊಬ್ಬನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸತೀಶ್ ಕುಮಾರ್ ಗಲ್ಲು ಶಿಕ್ಷೆಗೊಳಗಾದ ವ್ಯಕ್ತಿ. ಮದ್ಯ ವ್ಯಸನಿಯಾಗಿದ್ದ ಸತೀಶ್‍ಕುಮಾರನಿಗೆ ಶಿವಶಂಕರ್ ಮತ್ತು ಆದಿತ್ಯ ಎಂಬ ಎರಡು ಮುದ್ದಾದ ಮಕ್ಕಳಿದ್ದವು.

ದುಡಿದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದು ಮನೆಗೆ ಬಂದು ಪತ್ನಿ ಜ್ಯೋತಿಗೆ ಹೊಡೆದು ಬಡಿದು ಚಿತ್ರ ಹಿಂಸೆ ನೀಡುತ್ತಿದ್ದ. ಕಳೆದ 2016ರ ನವೆಂಬರ್ 15ರಂದು ಸತೀಶ್‍ಕುಮಾರ್ ಮತ್ತು ಜ್ಯೋತಿ ನಡುವೆ ಸಾಂಬಾರ್ ಸೀದು ಹೋದ ವಿಚಾರಕ್ಕೆ ಗಲಾಟೆಯಾಗಿ ಜ್ಯೋತಿಗೆ ದನಕ್ಕೆ ಬಡಿದಂತೆ ಬಡಿದಿದ್ದರಿಂದ ಆಕೆ ತನ್ನ ಎರಡು ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದಳು.

ಪತ್ನಿಯ ಮೇಲಿನ ಕೋಪದಿಂದ ಸತೀಶ್‍ಕುಮಾರ್ ಅತ್ತೆ ಮನೆಗೆ ತೆರಳಿ ತನ್ನ ಎರಡು ಮಕ್ಕಳನ್ನು ಮನೆಗೆ ಕರೆ ತಂದು ಕಬ್ಬಿಣದ ಉಳಿಯಿಂದ ಮಕ್ಕಳ ತಲೆ, ಮುಖ, ಮತ್ತಿತರ ಕಡೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಕುರಿತಂತೆ ಜ್ಯೋತಿ ನೀಡಿದ ದೂರು ದಾಖಲಿಸಿಕೊಂಡ ತನಿಖಾಧಿಕಾರಿಗಳಾದ ಪ್ರಕಾಶ್, ರಾಥೋಡ್ ಹಾಗೂ ಕೆಂಪೇಗೌಡ ಮತ್ತವರ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆಯನ್ನು ಕೈಗೆತ್ತಿಕೊಂಡ 45ನೆ ಅಪರ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇ.ರಾಜೀವ್‍ಗೌಡ ಅವರು ಸಣ್ಣ ಮಕ್ಕಳನ್ನು ಕೊಲ್ಲುವುದು ಕ್ರೂರ ಅಪರಾಧ. ನಮ್ಮ ವೇದ ಪುರಾಣಗಳಲ್ಲೂ ಮಕ್ಕಳನ್ನು ದೇವರ ಸಮಾನವಾಗಿ ಕಾಣುತ್ತೇವೆ.

ಅಂತಹ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದೂ ಅಲ್ಲದೆ ತಾಯಿಯಿಂದಲೂ ಮಕ್ಕಳ ಪ್ರೀತಿಯನ್ನು ಕಿತ್ತುಕೊಂಡ ಆರೋಪಿಗೆ ಮರಣ ದಂಡನೆ ನೀಡುವುದು ಸೂಕ್ತ ಎಂದು ತೀರ್ಪು ನೀಡಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ವೈ.ಕೆಂಭಾವಿ ವಾದ ಮಂಡಿಸಿದ್ದರು.

Facebook Comments