ಪಾಳು ಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಆ.19- ಪಾಳು ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಿ ಕಾಡಿಗೆ ಕಳುಹಿಸುವಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಯಶಸ್ವಿಗೊಂಡಿದ್ದಾರೆ.

ಬಂಗಾರಪೇಟೆ ಪಟ್ಟಣದ ಬೂದಿಕೋಟೆ ರಸ್ತೆಯಲ್ಲಿರುವ ಹಳೇ ಕಾಲದ ಕಲ್ಲು ಕಟ್ಟಡ ಬಾವಿಯಲ್ಲಿ ಜಿಂಕೆ ಬಿದ್ದಿತ್ತು. ಜಿಂಕೆಯನ್ನು ತಿಂದು ಹಾಕಲು ನಾಯಿಗಳು ಹೊಂಚು ಹಾಕಿದ್ದವು. ಆದರೆ ಜಿಂಕೆ ಸುಮಾರು 28 ಅಡಿ ಆಳದಲ್ಲಿದ್ದ ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ನೀರು ಆಹಾರ ಇಲ್ಲದೆ ಬಾವಿಯಲ್ಲೇ ಆಶ್ರಯ ಪಡೆದುಕೊಂಡಿತ್ತು.

ಶಿವಶಂಕರ್ ಎಂಬುವರು ಬಾವಿಯ ಬಳಿ ನೋಡಿದಾಗ ಜಿಂಕೆ ಕಂಡು ಬಂದಿದ್ದು ಕೂಡಲೇ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಜಿಂಕೆಯನ್ನು ಜೀವಂತವಾಗಿ ಹಿಡಿದು ಕಾಡಿಗೆ ಸುರಕ್ಷಿತವಾಗಿ ಕಳುಹಿಸುವಲ್ಲಿ ಶ್ರಮಿಸಿದ ಹೆಡ್‍ಕಾನ್ಸ್‍ಟೇಬಲ್‍ಗಳಾದ ಕೆ.ಶ್ರೀನಿವಾಸ್, ಕೆ.ಎಸ್.ಶ್ರೀನಿವಾಸ್, ಅಗ್ನಿಶಾಮಕ ದಳ ಸಿಬ್ಬಂದಿಗಳಾದ ಬಿ.ಎಂ.ಮುನಿಯಪ್ಪ, ಮಲ್ಲಿಕಾರ್ಜುನ, ಅಶ್ವತ್ಥ್, ಗೃಹ ರಕ್ಷಕ ದಳ ಸಿಬ್ಬಂದಿ ಶ್ರೀನಿವಾಸ್ ಮತ್ತು ಗಣೇಶ್ ರವರಿಗೆ ನಾಗರೀಕರು ಅಭಿನಂದನೆ ಸಲ್ಲಿಸಿದ್ದಾರೆ.

Facebook Comments