ಸಿದ್ದು-ಎಚ್‌ಡಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡ್ತಿನಿ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಡಗೋಡ,ನ.28- ಶಾಸಕರನ್ನು ಹಣಕೊಟ್ಟು ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ನಡೆಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರನ್ನು ಎಷ್ಟು ಹಣ ಕೊಟ್ಟು ಖರೀದಿ ಮಾಡಿದ್ದೇವೆ ಎಂಬುದನ್ನು ಸಿದ್ದರಾಮಯ್ಯ ಇಲ್ಲವೇ ಕುಮಾರಸ್ವಾಮಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.

ಶಾಸಕರು ಸರ್ಕಾರದಲ್ಲಿ ತಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ. ಅಲ್ಲದೆ ಸರ್ಕಾರದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾಗಿ ಶಾಸಕರೇ ಹೇಳಿದ್ದಾರೆ. ಆದರೂ ಈ ಇಬ್ಬರೂ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  ಕಾಂಗ್ರೆಸ್-ಜೆಡಿಎಸ್ ಏನೇ ತಿಪ್ಪರಲಾಗ ಹಾಕಿದರೂ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. 15ಕ್ಕೂ 15 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ನೂರಕ್ಕೆ ನೂರರಷ್ಟು ಶತಸಿದ್ದ. ನಮ್ಮ ಅಭ್ಯರ್ಥಿಗಳು ಈಗಾಗಲೇ ಎಲ್ಲ ಕಡೆ ಗೆದ್ದಾಗಿದೆ. ನನಗೆ ಬೇಕಾಗಿರುವುದು ಗೆಲುವಿನ ಅಂತರವಷ್ಟೇ ಎಂದು ಹೇಳಿದರು.

ಈ ಚುನಾವಣೆ ಅಭಿವೃದ್ಧಿ ಆಧಾರದ ಮೇಲೆ ನಡೆಯುತ್ತಿರುವುದರಿಂದ ಮತದಾರರು ಬಿಜೆಪಿ ಪರವಾಗಿ ಇದ್ದಾರೆ. ಸರ್ಕಾರ ಮುಂದಿನ ದಿನಗಳ ಅವಧಿಯಲ್ಲಿ ಸ್ಥಿರವಾಗಿ ಇರಬೇಕಾದ ಕಾರಣ ನಮಗೆ ಬಹುಮತ ನೀಡುವುದರಲ್ಲಿ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಸೆಂಬರ್ 9ರ ನಂತರವೂ ಸರ್ಕಾರ ಸುಭದ್ರವಾಗಿರುತ್ತದೆ. ಕೆಲವು ಏನೇನೋ ಕನಸು ಕಾಣುತ್ತಿದ್ದಾರೆ. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ.

ಯಾರು ಏನೇ ಭವಿಷ್ಯ ನುಡಿದರೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ರಾಜಕೀಯ ದ್ರುವೀಕರಣವೂ ಇಲ್ಲ ಯಾವುದೂ ಇಲ್ಲ ಎಂದು ಪುನರುಚ್ಚಿಸಿದರು. ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಗೆಲ್ಲುವುದು ಶತಸಿದ್ಧ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಇಲ್ಲಿ ಠೇವಣಿಯೂ ಸಿಗುವುದಿಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

Facebook Comments