ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗದಂತೆ ಸೂಕ್ತ ಕ್ರಮ : ಸಚಿವ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17-ಕಾರ್ಯಾದೇಶ ನೀಡಿದ ನಂತರ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗದಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಜನಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಕಾರಜೋಳ, ಯಾವುದೇ ಕಾಮಗಾರಿಗೆ ಕಾರ್ಯಾದೇಶ ನೀಡಿದ ನಂತರ ಕಾಮಗಾರಿ ಶಂಕುಸ್ಥಾಪನೆ ವಿಳಂಬವಾಗಬಾರದು. ವಿಳಂಬವಾದರೆ ಕಾಮಗಾರಿ ವೆಚ್ಚ ಹೆಚ್ಚಾಗಲಿದೆ. ಈ ಬಗ್ಗೆ ಪರಿಶೀಲಿಸಿ ವಿಳಂಬವಾಗದಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶಿವಶಂಕರ ರೆಡ್ಡಿ, ಕಾರ್ಯಾದೇಶ ನೀಡಿ ಆರು ತಿಂಗಳಾದರೂ ಕೆಲಸ ಪ್ರಾರಂಭವಾಗಿಲ್ಲ. ಕಾರ್ಯಾದೇಶ ನೀಡಿದ ನಂತರ ಒಂದು ತಿಂಗಳಲ್ಲಿ ಸಂಬಂಧಪಟ್ಟ ಸಚಿವರು ಶಂಕುಸ್ಥಾಪನೆ ಮಾಡದಿದ್ದರೆ ಆಯಾ ಕ್ಷೇತ್ರದ ಶಾಸಕರೇ ಶಂಕುಸ್ಥಾಪನೆ ನೆರವೇರಿಸಲು ಅವಕಾಶ ನೀಡಿ ಎಂದು ಸಲಹೆ ಮಾಡಿದರು.

ಈ ಸಲಹೆ ಸರಿಯಾಗಿದೆ ಎಂದು ಹೇಳಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಕಾರಜೋಳ ಅವರಿಗೆ ಈ ಸಲಹೆ ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಹೇಳಿದರು. ಆಗ ಕಾರಜೋಳ ಮೇಲಿನಂತೆ ಪ್ರತಿಕ್ರಿಯಿಸಿದರು.

ಉತ್ತರ ನೀಡಿದ ಸಚಿವ ಎಂಟಿಬಿ ನಾಗರಾಜ್ ಅವರು, ಗೌರಿಬಿದನೂರು ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರು ಫೆ.25ರಂದು ಕಾರ್ಯಾದೇಶ ನೀಡಿದ್ದಾರೆ.

ಲಾಕ್‍ಡೌನ್‍ನಿಂದಾಗಿ ವಿಳಂಬವಾಗಿದೆ. ಈಗಾಗಲೇ ಕಾಮಗಾರಿ ಸ್ಥಳವನ್ನು ಗುತ್ತಿಗೆದಾರರಿಗೆ ಜೂ.22ರಂದು ಹಸ್ತಾಂತರಿಸಲಾಗಿದೆ. ವಿಳಂಬಕ್ಕೆ ಆಸ್ಪದ ನೀಡದಂತೆ ಕಾಮಗಾರಿಯನ್ನು ನಿರ್ಧಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Facebook Comments