3ನೇ ಬಾರಿಗೆ ದೆಹಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.16- ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಭಾರಿಸಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಪರಮೋಚ್ಚ ನಾಯಕ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇಜ್ರಿವಾಲ್ ಅವರೊಂದಿಗೆ ಆರು ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಿದರು.

ಮನೀಷ್ ಸಿಸೋಡಿಯಾ, ಸತ್ಯಂದ್ರ ಜೈನ್ , ಇಮ್ರಾನ್ ಹುಸೇನ್, ರಾಜೇಂದ್ರಪಾಲ್ ಗೌತಮ್, ಕೈಲಾಸ್ ಗೆಲ್ಹೋಟ್ ಮತ್ತು ಗೋಪಾಲ್ ರಾಯ್ ಪ್ರಮಾಣ ಸ್ವೀಕರಿಸಿದ ಸಚಿವರಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಜನತೆಗೆ ಕೃತಜ್ಞತೆ ಸಲ್ಲಿಸಿದರು.ನಿಮ್ಮ ಮಗ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದಾನೆ. ಈ ಗೆಲುವು ನನ್ನದಲ್ಲ. ಈ ಪ್ರಚಂಡ ಜಯಕ್ಕೆ ನೀವೇ ಕಾರಣ ಎಂದು ಮುಖ್ಯಮಂತ್ರಿ ಭಾವುಕರಾಗಿ ನುಡಿದರು.

ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಎಎಪಿ ಸರ್ಕಾರ ಯಾವ ವಿಷಯದಲ್ಲೂ ಮಲತಾಯಿ ಧೋರಣೆ ಅನುಸರಿಸಿಲ್ಲ. ಯಾರೊಂದಿಗೂ ವೈರತ್ವ ಸಾಧಿಸಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಪಥದತ್ತ ಮುನ್ನಡೆದಿದ್ದೇವೆ. ಇದಕ್ಕೆ ಬೆಲೆ ಕೊಟ್ಟು ನೀವು ನಮಗೆ ಮತ್ತೆ ಆಶೀರ್ವಾದ ನೀಡಿದ್ದೀರಿ ಎಂದು ಪ್ರಚಂಡ ಕರತಾಡನದ ನಡುವೆ ಕೇಜ್ರಿವಾಲ್ ಹೇಳಿದರು.

ದೆಹಲಿಯನ್ನು ಇಡೀ ಭಾರತದಲ್ಲೇ ನಂಬರ್ ಒನ್ನಾಗಿ ಮಾಡುವ ದೃಢ ಸಂಪಕಲ್ಪ ಹೊಂದಿದ್ದೇನೆ. ಇದಕ್ಕಾಗಿ ನಿಮ್ಮೆಲ್ಲರ ಬೆಂಬಲ ಅಗತ್ಯವಿದೆ. ಕೇಂದ್ರ ಸರ್ಕಾರದ ಸಹಕಾರ ಮತ್ತು ಬೆಂಬಲದೊಂದಿಗೆ ಮತ್ತಷ್ಟು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇನೆ ಎಂದು ಅವರು ಜನಸ್ತೋಮಕ್ಕೆ ಆಶ್ವಾಸನೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನನ್ನನ್ನು ಮತ್ತು ನಮ್ಮ ಪಕ್ಷವನ್ನು ಕಟುವಾಗಿ ಟೀಕಿಸಿ ಲೇವಡಿ ಮಾಡಿದ್ದವು. ಇದನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರ ಹೇಳಿಕೆಗಳನ್ನು ನಾನು ಕ್ಷಮಿಸುತ್ತೇನೆ ಎಂದು ಸಿಎಂ ಹೇಳಿದರು.  ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಆಶೀರ್ವಾದ ಪಡೆದು ದೆಹಲಿಯ ಸರ್ವತೋಮುಖ ಅಭಿವೃದ್ಧಿಗೆ ಅವರ ಸಹಕಾರ ಮತ್ತು ಬೆಂಬಲ ಕೋಡುತ್ತೇನೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದರು.

Facebook Comments

Sri Raghav

Admin