ಯುಪಿ ಮಾದರಿಯಲ್ಲೇ ದೆಹಲಿ ಗಲಭೆಕೋರರ ಆಸ್ತಿ ಜಪ್ತಿಗೆ ಮುಂದಾದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.29- ಈಶಾನ್ಯ ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವ್ಯಾಪಕ ಪ್ರತಿಭಟನೆ, ಗಲಭೆ ಮತ್ತು ಹಿಂಸಾಚಾರದಿಂದ ಕೋಟ್ಯಂತರ ರೂ.ನಷ್ಟು ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳು ಹಾನಿಯಾಗಿವೆ. ಅದಕ್ಕೆ ಕಾರಣರಾದ ದುಷ್ಕರ್ಮಿಗಳು ಮತ್ತು ಗಲಭೆ ಕೋರರಿಂದಲೇ ಹಾನಿಯ ಮೊತ್ತವನ್ನು ವಸೂಲಿ ಮಾಡಲು ದೆಹಲಿ ಪೊಲೀಸರು ನಿರ್ಧರಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಗಲಭೆಕೋರರಿಂದ ಆಸ್ತಿ-ಪಾಸ್ತಿ ನಷ್ಟದ ಪರಿಹಾರದ ಹಣವನ್ನು ವಸೂಲಿ ಮಾಡುವ ಸಂಬಂಧ ಇತ್ತೀಚೆಗೆ ಕ್ರಮ ಕೈಗೊಂಡ ಉತ್ತರ ಪ್ರದೇಶ ಮಾದರಿಯನ್ನೇ ಈಗ ದೆಹಲಿ ಪೊಲೀಸರು ಅನುಸರಿಸುತ್ತಿದ್ದಾರೆ. ಗಲಭೆ ಕೋರರು ಮತ್ತು ದುಷ್ಕರ್ಮಿಗಳಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿ ನಷ್ಟದ ಮೊತ್ತವನ್ನು ವಸೂಲಿ ಮಾಡಲು ಭಾರೀ ದಂಡ ವಿಧಿಸುವಿಕೆ ಮತ್ತು ಅವರ ಸ್ವತ್ತುಗಳನ್ನು ಜಫ್ತಿ ಮಾಡುವ ನಿರ್ಧಾರವನ್ನು ದೆಹಲಿ ಪೊಲೀಸ್ ಇಲಾಖೆ ಕೈಗೊಂಡಿದೆ.

ಈಶಾನ್ಯ ದೆಹಲಿಯ ಜಫ್ರಾಬಾದ್, ಮೌಜಿ, ಭಾರಮ್‍ಪುರ್ ಸೇರಿದಂತೆ ವಿವಿಧೆಡೆ ನಾಲ್ಕು ದಿನಗಳ ಕಾಲ ಭುಗಿಲೆದ್ದ ವ್ಯಾಪಕ ಹಿಂಸಾಚಾರ, ಗಲಭೆ, ಲೂಟಿ, ದಾಂಧಲೆ, ಅಗ್ನಿಸ್ಪರ್ಶ ಇತ್ಯಾದಿ ಕಾರಣಗಳಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮತ್ತು ಪರ ಪ್ರತಿಭಟನೆ ಮತ್ತು ಹಿಂಸಾಚಾರದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಸ್ಥಳೀಯ ಕ್ರಿಮಿನಲ್‍ಗಳು ಮತ್ತು ಅಪರಾಧ ಹಿನ್ನೆಲೆಯುಳ್ಳವರು ಜನರ ಆಸ್ತಿ-ಪಾಸ್ತಿ ಲೂಟಿ ಮಾಡಿ ಮನೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೊಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ತನಿಖೆ ನಡೆಸಿರುವ ದೆಹಲಿ ಪೊಲೀಸ್ ಇಲಾಖೆಯ ಕ್ರೈಮ್ ಬ್ರಾಂಚ್ ವಿಭಾಗದ ವಿಶೇಷ ಅಪರಾಧ ತನಿಖಾ ದಳದ ಅಧಿಕಾರಿಗಳು ಆಯಾ ಪ್ರದೇಶಗಳ ಪೊಲೀಸರು ಮತ್ತು ನಗರ ಪಾಲಿಕೆ ಅಧಿಕಾರಿಗಳ ಸಮನ್ವಯತೆಯಿಂದ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡುತ್ತಿದ್ದಾರೆ.

ಗಲಭೆ ಕಾರಣರಾದ ಸುಮಾರು ಒಂದು ಸಾವಿರ ದುಷ್ಕರ್ಮಿಗಳು ಮತ್ತು ಗಲಭೆಕೋರರನ್ನು ಗುರುತಿಸಲಾಗಿದ್ದು, ಈಗಾಗಲೇ 650ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿ ಅವರ ಆಸ್ತಿ-ಪಾಸ್ತಿ ಮತ್ತಿತರ ವಸ್ತುಗಳನ್ನು ಜಫ್ತಿ ಮಾಡಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಯನ್ನು ಹಾನಿಯನ್ನೂ ಸರಿದೂಗಿಸಲು ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

Facebook Comments