ದೆಹಲಿ ಆರೋಗ್ಯ ಮಂತ್ರಿಗೂ ಕೊರೊನಾ ಸೋಂಕು..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.13-ಕಿಲ್ಲರ್ ಕೊರೊನಾ ದಾಳಿಯಿಂದ ಭಾರತೀಯರು ಹೆದರಿ ಕಂಗಲಾಗಿದ್ದು, ಗಣ್ಯಾತಿಗಣ್ಯರಿಗೂ ಮಹಾಮಾರಿಯ ಆತಂಕ ಎದುರಾಗಿಸದ್ದು, ಮಂತ್ರಿ ಮಹೋದಯರಿಗೂ ಕೋವಿಡ್-19 ಸೋಂಕು ಲಕ್ಷಣಗಳು ಗೋಚರಿಸುತ್ತಿವೆ.

ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸತ್ಯೇಂದ್ರ ಜೈನ್ ಅವರಿಗೂ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತ್ಯೇಂದ್ರ ಜೈನ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಂದು ಅಪರಾಹ್ನ ಫಲಿಶಾಂಶ ಲಭ್ಯವಾಗಲಿದೆ. ನಿನ್ನೆ ಸಂಜೆಯಿಂದ ಸತ್ಯೇಂದ್ರ ಜೈನ್ ಅವರಿಗೆ ತೀವ್ರ ಜ್ವರ ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು.

ಈ ಕುರಿತು ಸ್ವತಃ ಟ್ವಿಟ್ ಮಾಡಿರುವ ಜೈನ್, ನನಗೆ ಅಧಿಕ ಉಷ್ಣಾಂಶದ ಜ್ವರ ಮತ್ತು ದೇಹದಲ್ಲಿ ಆಮ್ಲಜನಕದ ಕೊರತೆಯಿಂದ ಅಸ್ವಸ್ಥನಾಗಿದ್ದೇನೆ. ಈಗ ಆಸ್ಪತ್ರೆಯಲ್ಲಿದ್ದೇನೆ. ನನ್ನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿತ್ತೇನೆ ಎಂದು ಹೇಳಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಿಗೇ ರೋಗ ಲಕ್ಷಣ ಕಂಡುಬಂದಿದೆ. ಕಳೆದ ವಾರ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಆನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿ ಫಲಿತಾಂಶ ನೆಗೆಟಿವ್ ಆಗಿದೆ.

ಮಾಜಿ ಪ್ರಧಾನಿ, ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕಾಂಗ್ರೆಸ್ ಮುತ್ಸದ್ಧಿ ಡಾ. ಮನಮೋಹನ್ ಸಿಂಗ್ ಅವರೂ ಸಹ ಕೊರೊನಾ ವೈರಸ್ ಸೋಂಕು ಸಾಧ್ಯತೆಯ ಆತಂಕಕ್ಕೆ ಒಳಗಾಗಿದ್ದರು. ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರು ಡಾ. ಸಿಂಗ್ ಅವರ ಮನೆಯ ಕೆಲಸಗಾರರೊಬ್ಬರ ಪುತ್ರಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟಿದ್ದು, ಇಡೀ ಕುಟುಂಬವನ್ನು ಪ್ರತ್ಯೇಕವಾಗಿರಿಸಲಾಗಿದೆ.

ದೆಹಲಿಯ ಆರೋಗ್ಯ ಇಲಾಖೆ ಸಿಬ್ಬಂದಿ ಮಾಜಿ ಪ್ರಧಾನಿ ಅವರ ನಿವಾಸಕ್ಕೆ ಕ್ವಾರಂಟೈನ್ (ಪ್ರತ್ಯೇಕ ವಾಸ) ನೋಟಿಸ್ ಅಂಟಿಸಿದ್ದಾರೆ.  ಮಹಾರಾಷ್ಟ್ರದ ಮೂವರು ಸಚಿವರಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

Facebook Comments