ಟ್ವಿಟ್ಟರ್ ನಲ್ಲಿ ಕೇಂದ್ರ ಸಚಿವರ ಪತ್ನಿಯ ಆದಾಯ ಪ್ರಶ್ನಿಸಿದಕ್ಕೆ ಕೋರ್ಟ್ ಹೇಳಿದ್ದೇನು ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.13- ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದಿಪ್ ಸಿಂಗ್ ಪುರಿ ಅವರ ಪತ್ನಿ ಲಕ್ಷ್ಮೀಪುರಿ ಅವರ ಆದಾಯ ಮೂಲವನ್ನು ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರ ಟ್ವಿಟ್‍ಗಳನ್ನು ತಕ್ಷಣವೇ ಡಿಲಿಟ್ ಮಾಡಬೇಕೆಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.

ವಿಶ್ವ ಸಂಸ್ಥೆಯ ಮಾಜಿ ಸಹಾಯಕ ಕಾರ್ಯದರ್ಶಿ ಲಕ್ಷ್ಮೀಪುರಿ ಅವರು ಇತ್ತೀಚೆಗೆ ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ಆಸ್ತಿಯೊಂದನ್ನು ಖರೀದಿಸಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು ಸಾಕೇತ್ ಗೋಖಲೆ ಅವರು ಲಕ್ಷ್ಮೀ ಅವರ ಆದಾಯ ಮೂಲವನ್ನು ಪ್ರಶ್ನಿಸಿ ಜ.13 ಮತ್ತು 26ರಂದು ಸರಣಿ ಟ್ವಿಟ್‍ಗಳನ್ನು ಮಾಡಿದ್ದರು.

ಆದರೆ, ಟ್ವಿಟ್‍ನಲ್ಲಿ ತಪ್ಪು ಮಾಹಿತಿ ಹಾಗೂ ಮಾನಹಾನಿಕಾರಕ ಅಂಶಗಳು ಇವೆ ಎಂದು ಆರೋಪಿಸಿ ಲಕ್ಷ್ಮೀಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಾಕೇತ್ ವಿರುದ್ಧ ಐದು ಕೋಟಿ ರೂ.ಗಳ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಇದರ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ದೇಶದ ನಾಗರಿಕರಿಗೆ ಜನ ಸೇವಕರ ಆದಾಯ ಮತ್ತು ಅದರ ಮೂಲವನ್ನು ತಿಳಿದುಕೊಳ್ಳುವ ಅಧಿಕಾರವಿದೆ. ಆದರೆ, ಮೊದಲು ಸಂಬಂಧಿಸಿದ ವ್ಯಕ್ತಿಗಳು ಅಥವಾ ಅದಕ್ಕೆ ಪೂರಕವಾದ ಪ್ರಾಧಿಕಾರದ ಬಳಿ ಮಾಹಿತಿ ಕೇಳುವ ಪ್ರಯತ್ನ ಮಾಡಬೇಕು. ಏಕಾಏಕಿ ಸಾರ್ವಜನಿಕವಾಗಿ ತಮ್ಮ ಮಾಹಿತಿಗಳನ್ನು ಪ್ರಕಟಿಸಬಾರದು ಎಂದು ಹೇಳಿದೆ.

ಸಾಕೇತ್ ಅವರು 24 ಗಂಟೆಯೊಳಗಾಗಿ ತಮ್ಮ ಟ್ವಿಟ್‍ಗಳನ್ನು ತೆಗೆದು ಹಾಕಬೇಕು. ಇಲ್ಲದೇ ಹೋದರೆ ಟ್ವಿಟರ್ ಸಂಸ್ಥೆ ಆಕ್ಷೇಪಾರ್ಹ ಟ್ವಿಟ್‍ಗಳನ್ನು ಮರೆಮಾಚಬೇಕೆಂದು ಸೂಚನೆ ನೀಡಿದೆ.

Facebook Comments