ದೆಹಲಿ ಪೊಲೀಸ್ ಪೇದೆ ಮೇಲೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.1 (ಪಿಟಿಐ)- ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ್ದಕ್ಕಾಗಿ ಬಂಧಿಸಲು ಹೋದ ಪೊಲೀಸ್ ಕಾನ್ಸ್‍ಟೇಬಲ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ದಕ್ಷಿಣ ದೆಹಲಿ ಸಂಘಮ್ ವಿಹಾರ್ ವಾಸಿ ಶಿವರಾಮ್ (40) ಎಂಬುವನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಮಹಿಳೆಯೊಬ್ಬರು ನಿಂದನೆ, ಕಿರುಕುಳ ಮತ್ತು ಕೆಟ್ಟದಾಗಿ ವರ್ತಿಸಿರುವ ಬಗ್ಗೆ ಆರೋಪ ಮಾಡಿದ್ದರು. ಕೆ.ಎಂ. ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ನಿಂದನೆ, ಕಿರುಕುಳ, ಬೆದರಿಕೆ ಮತ್ತು ಆರೋಪಿಯನ್ನು ಭೇಟಿಯಾಗಲು ಒತ್ತಾಯಿಸಿದ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರ ಮೇಲೆ ಸಬ್‍ಇನ್ಸ್‍ಪೆಕ್ಟರ್‍ಗಳಾದ ಕೋಮಲ್, ಸಂದೀಪ್ ಹಾಗೂ ಪೇದೆ ನೆಹ್ರು ಅವರು ಸಂತ್ರಸ್ತೆಯನ್ನು ಬರಲು ಹೇಳಿದ್ದ ಐಎನ್‍ಎ ವೃತ್ತ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಬಂದಿರುವ ಸುಳಿವನ್ನು ತಿಳಿದು ಅಲ್ಲಿಂದ ಓಡಲು ಯತ್ನಿಸಿ ಚರಂಡಿಗೆ ಹಾರಿದ್ದಾನೆ. ಪೇದೆ ನೆಹ್ರು ಅವನನ್ನು ಹಿಂಬಾಲಿಸಿ ಹಿಡಿಯುವ ಸಂದರ್ಭದಲ್ಲಿ ಆರೋಪಿ ಶಿವರಾಂ ಇಟ್ಟಿಗೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.

ಆದರೂ ಪಟ್ಟುಬಿಡದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೇದೆಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾಂ ವಿರುದ್ದ ಕೇಸ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ (ದಕ್ಷಿಣ) ಅತುಲ್‍ಕುಮಾರ್ ಥಾಕೂರ್ ಹೇಳಿದ್ದಾರೆ.

Facebook Comments