ದೆಹಲಿಯಲ್ಲಿ ಬಿಗಿಭದ್ರತೆ : ನಿವೃತ್ತ ಪೊಲೀಸ್ ಸಿಬ್ಬಂದಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.27- ಗಣರಾಜ್ಯೋತ್ಸವ ದಿನದಂದು ರೈತರು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿ ರಕ್ಷಣೆಗಾಗಿ ನೇಮಿಸಿದ್ದ ಪೊಲೀಸರನ್ನು ಥಳಿಸಿ, 300ಕ್ಕೂ ಅಧಿಕ ಪೊಲೀಸರನ್ನು ಗಾಯಗೊಳಿಸಿರುವ ಕ್ರಮದ ವಿರುದ್ಧ ನಿವೃತ್ತ ಪೊಲೀಸ್ ಸಿಬ್ಬಂದಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.  ರೈತ ಸಂಘಟನೆಗಳಿಗೆ ಸಾಥ್ ನೀಡಿದ ನಿಹಾಂಗ್ಸ್ ಸಂಘಟನೆಗಳು ಕೆಂಪುಕೋಟೆಗೆ ನುಗ್ಗಿ ಐತಿಹಾಸಿಕ ಗೋಪುರದ ಮೇಲೆ ತಮ್ಮ ಬಾವುಟ ಹಾರಿಸಿದ್ದಲ್ಲದೆ, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟುಮಾಡಿದ್ದಾರೆ.

ಅಲ್ಲದೆ, ಭದ್ರತೆ ನೀಡುತ್ತಿದ್ದ ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿ, ಗಾಯಗೊಳಿಸಿರುವ ಪ್ರತಿಭಟನಾಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಪೊಲೀಸರು ಒತ್ತಾಯಿಸಿದ್ದಾರೆ.  ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗುವಂತ ಅನುಸರಿಸಿರುವ ಕ್ರಮ ಖಂಡನೀಯ. ರೈತ ಸಂಘಟನೆಗಳು ಎಂದು ಹೇಳಿಕೊಳ್ಳುವವರು ನಡೆದುಕೊಂಡು ರೀತಿ ಸರಿಯಿಲ್ಲ ಎಂದು ಅವರು ಹೇಳಿದ್ದಾರೆ.

ನಿನ್ನೆ ನಡೆದ ರೈತರ ದಾಂಧಲೆ ಹಾಗೂ ಇಂದಿನ ನಿವೃತ್ತ ಪೊಲೀಸರ ಮುಷ್ಕರದ ಸಲುವಾಗಿ ಪೊಲೀಸರು ರಾಜಧಾನಿಯಲ್ಲಿ ಇಂದೂ ಕೂಡ ದೆಹಲಿಯ ಹಲವೆಡೆ ಬಿಗಿಭದ್ರತೆ ಏರ್ಪಡಿಸಿದ್ದಾರೆ. ಐಟಿಒ ಕಡೆಯಿಂದ ಇಂಡಿಯಾ ಗೇಟ್‍ಗೆ ಸಂಚರಿಸುವ ವಾಹನಗಳ ಮಾರ್ಗ ಬದಲಾಯಿಸಲಾಗಿದೆ. ಮಿಂಟೋ ರಸ್ತೆಯಿಂದ ಕನ್ಹಾಟ್‍ಪ್ಲೇಸ್ ಪ್ರದೇಶಕ್ಕೆ ತೆರಳುವ ಸಂಚಾರಕ್ಕೂ ತಡೆ ಒಡ್ಡಲಾಗಿದೆ. ಅಲ್ಲದೆ, ಗಾಜಿಯಾಪುರ್ ಮಾರುಕಟ್ಟೆಯ ಎನ್‍ಎಚ್-9 ಮತ್ತು ಎನ್‍ಎಚ್-24 ರಸ್ತೆಯನ್ನು ಕೂಡ ನಿರ್ಬಂಧಿಸಲಾಗಿದೆ.

ಇನ್ನೂ ದೆಹಲಿಯಿಂದ ಗಾಜಿಯಾಬಾದ್ ಹೋಗುವ ವಾಹನಗಳು ಶಾದಾರ ಮತ್ತು ಡಿಎನ್‍ಡಿ ಮಾರ್ಗಗಳನ್ನು ಬಳಸಬೇಕೆಂದು ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್‍ಒ ಅನಿಲ್ ಮಿಟ್ಟಲ್ ತಿಳಿಸಿದ್ದಾರೆ.

Facebook Comments