ದೆಹಲಿ : ಖಾಸಗಿ ವಾಹನಗಳ ಮುಷ್ಕರ. ಜನಜೀವನ ಅಸ್ತವ್ಯಸ್ತ, ಕೆಲವೆಡೆ ಕಲ್ಲು ತೂರಾಟ,

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.19- ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯಿದೆ ವಿರೋಧಿಸಿ ದೆಹಲಿಯಲ್ಲಿಂದು ಖಾಸಗಿ ವಾಹನಗಳ ಮಾಲೀಕರು ಮತ್ತು ಚಾಲಕರು ಕರೆ ನೀಡಿದ್ದ ಮುಷ್ಕರದ ವೇಳೆ ಕೆಲವೆಡೆ ಕಲ್ಲು ತೂರಾಟ ಮತ್ತು ಗಲಭೆಗಳು ನಡೆದಿವೆ.

ದೆಹಲಿ-ರಾಷ್ಟ್ರ ರಾಜಧಾನಿ ಪ್ರಾಂತ್ಯ (ಎನ್‍ಸಿಆರ್)ದಲ್ಲಿ ಇಂದು ಕರೆ ನೀಡಿದ್ದ ಬಂದ್‍ನಿಂದಾಗಿ ವಾಹನಗಳ ಸಂಚಾರ ವಿರಳವಾಗಿತ್ತು. ಮುಷ್ಕರದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳು ಮತ್ತು ಕೆಲ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವೆಡೆ ರಸ್ತೆಗಿಳಿದ ಖಾಸಗಿ ವಾಹನಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆಲ ವಾಹನಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಕೆಲವೆಡೆ ಉದ್ರಿಕ್ತ ಗುಂಪು ಖಾಸಗಿ ವಾಹನಗಳನ್ನು ತಡೆದು ಅದರೊಳಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಸಂದರ್ಭ ದಲ್ಲಿ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯಿದೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವುದನ್ನು ವಿರೋಧಿಸಿ ಖಾಸಗಿ ಕ್ಯಾಬ್, ಟ್ಯಾಕ್ಸಿ, ಆಟೋ ಮತ್ತಿತರರ ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರು ಮುಷ್ಕರ ನಡೆಸುತ್ತಿದ್ದಾರೆ.

Facebook Comments