ಬಿಗಿ ಭದ್ರತೆಯ ನಡುವೆ ದೆಹಲಿ ವಿಧಾನಸಭೆ ಚುನಾವಣೆಗೆ ಬಿರುಸಿನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.8- ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಹೈವೋಲ್ಟೇಜ್ ದೆಹಲಿ ವಿಧಾನಸಭೆಗೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು, 1.47 ಕೋಟಿ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ದೆಹಲಿಯ 2689 ಸ್ಥಳಗಳಲ್ಲಿ ಒಟ್ಟು 13,750 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತೀವ್ರ ಚಳಿ ನಡುವೆಯೂ ಮತದಾರರು ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಈ ಬಾರಿ 81 ಲಕ್ಷ ಪುರುಷರು, 66.86 ಲಕ್ಷ ಮಹಿಳೆಯರು ಮತ್ತು 869 ತೃತೀಯ ಲಿಂಗಿಗಳು ಮತದಾನದ ಹಕ್ಕು ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ರಣಬೀರ್‍ಸಿಂಗ್ ತಿಳಿಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಆಡಳಿತಾರೂಢ ಅಮ್ ಅದ್ಮಿ ಪಾರ್ಟಿ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಈ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.  ಎಎಪಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಎರಡನೆ ಬಾರಿ ಮುಖ್ಯಮಂತ್ರಿಯಾಗುವ ತವಕದಲ್ಲಿದ್ದಾರೆ.

ಇನ್ನೊಂದೆಡೆ ಎಎಪಿ ಪ್ರಾಬಲ್ಯವನ್ನು ತಡೆದು ದೆಹಲಿಯಲ್ಲಿ ಕೇಸರಿ ಧ್ವಜ ಹಾರಿಸಲು ಬಿಜೆಪಿ ಸಜ್ಜಾಗಿದೆ. ಮತ್ತೊಂದೆಡೆ ಕಾಂಗ್ರೆಸ್‍ಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಇದೇ ಕಾರಣಕ್ಕಾಗಿ ಈ ಮೂರೂ ಪಕ್ಷಗಳು ಭರ್ಜರಿ ಚುನಾವಣಾ ಪ್ರಣಾಳಿಕೆಗಳ ಮೂಲಕ ಮತದಾರರನ್ನು ಓಲೈಸುವೆ. ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಮುಖಂಡರು ದೆಹಲಿಯಾದ್ಯಂತ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಮತ್ತೊಂದೆಡೆ ಬಿಜೆಪಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಘಟಾನುಘಟಿಗಳು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕರು ಸಹ ಸಾರ್ವಜನಿಕ ಸಭೆಗಳನ್ನು ನಡೆಸಿ ಮತ ಯಾಚಿಸಿದರು.  ಎಪಿಪಿಯಿಂದ ಅರವಿಂದ ಕೇಜ್ರಿವಾಲ್ (ನವದೆಹಲಿ), ಉಪಮುಖ್ಯಮಂತ್ರಿ ಮಾನಿಷ್ ಸಿಸೋಡಿಯಾ, ಗೋಪಾಲ್‍ರಾಯ್, ರಾಖಿ ಬಿರ್ಲಾ, ಸತ್ಯೇಂದ್ರ ಜೈನ್ ಆತಿಕ್ ಸೇರಿದಂತೆ ಘಟಾನುಘಟಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿಯಿಂದ ಓಂ ಪ್ರಕಾಶ್ ಶರ್ಮ, ಕಪಿಲ್ ಮಿಶ್ರಾ, ವಿಜಯೇಂದ್ರ ಗುಪ್ತ ಹಾಗೂ ನಾಲ್ವರು ಮಾಜಿ ಮೇಯರ್‍ಗಳಾದ ಆಜಾದ್ ಸಿಂಗ್, ಯೋಗೀಂದ್ರ ಚಂಡೋಲಿಯಾ, ರವೀಂದರ್ ಗುಪ್ತ ಮತ್ತು ಖುಷಿರಾಣಿ ಅಖಾಡದಲ್ಲಿರುವ ಪ್ರಮುಖರು. ಕಾಂಗ್ರೆಸ್‍ನಿಂದ ಅರುನ್ ಯೂಸುಫ್, ಅಲ್ಕಾಲಂಬಾ, ಆದರ್ಶ ಶಾಸ್ತ್ರಿ ಸ್ಪರ್ಧೆಯಲ್ಲಿದ್ದಾರೆ.

ಭಾರೀ ಬಂದೋಬಸ್ತ್: ಇಂದಿನ ಚುನಾವಣೆಗಾಗಿ ದೆಹಲಿಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಯ 190 ತುಕಡಿಗಳು, 40 ಸಾವಿರ ದೆಹಲಿ ಪೊಲೀಸರು ಮತ್ತು 19 ಸಾವಿರ ಗೃಹರಕ್ಷಕ ದಳದ ಸಿಬ್ಬಂದಿ ಬಿಗಿಭದ್ರತೆ ಕಾರ್ಯ ನಿರ್ವಹಿಸಲಿದ್ದಾರೆ.
ಫೆ.11ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ತೀವ್ರ ಕುತೂಹಲ ಕೆರಳಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಗೆದ್ದು ಅದ್ಭುತ ಜಯ ದಾಖಲಿಸಿತು. ಬಿಜೆಪಿ ಕೇವಲ 3 ಸ್ಥಾನಗಳನ್ನು ಮಾತ್ರ ಗಳಿಸಲಷ್ಟೇ ಶಕ್ತವಾಗಿತ್ತು. ಕಾಂಗ್ರೆಸ್ ಯಾವುದೇ ಖಾತೆ ತೆರೆಯಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ ಎಲ್ಲ ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡಿದ್ದು, 2020ರ ಚುನಾವಣೆಯಲ್ಲಿ ಗೆಲ್ಲುವ ತವಕದಲ್ಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಖಾತೆ ತೆರೆಯದ ಕಾಂಗ್ರೆಸ್ ಈ ಚುನಾವಣೆಯಲ್ಲಿ ತನ್ನ ಸಾಮಥ್ರ್ಯ ಉತ್ತಮಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಇಂದು ಸಂಜೆ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿದ್ದು ಕುತೂಹಲ ಕೆರಳಿಸಿದೆ.

Facebook Comments