ರಾಜ್ಯದಲ್ಲಿ ಡೆಲ್ಟಾ ವೈರಸ್ ಸೋಂಕಿತ ಇಬ್ಬರು ವ್ಯಕ್ತಿಗಳು ಗುಣಮುಖ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25- ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದ ಡೆಲ್ಟಾ ವೈರಸ್ ಸೋಂಕಿತ ಇಬ್ಬರು ವ್ಯಕ್ತಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಣಿಸಿಕೊಂಡಿದ್ದ ಓರ್ವ ವ್ಯಕ್ತಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಂಡಿದ್ದು, ಆರೋಗ್ಯದಿಂದಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗೂ ಚಿಕಿತ್ಸೆ ಕೊಡುತ್ತಿದ್ದೇವೆ. ಅವರು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಸಂಪರ್ಕದಲ್ಲಿರುವ ಯಾರಿಗೂ ಕೂಡ ಸೋಂಕು ಹಬ್ಬಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಈವರೆಗೂ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು.

ಸೋಂಕು ಯಾರೊಬ್ಬರಿಗೂ ತಗುಲದೆ ಇರುವುದು ಒಳ್ಳೆಯ ಬೆಳವಣಿಗೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ನಾವು ಗಡಿ ಹಂಚಿಕೊಂಡಿರುವುದರಿಂದ ನಮಗೆ ಕೊಂಚ ಆಂತಕ ಎದುರಾಗಿದೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಹೋಗುವವರು ಮತ್ತು ಬರುವವರು ದಿನಂಪ್ರತಿ ಹೆಚ್ಚಾಗುತ್ತಿದ್ದಾರೆ ಎಂದರು.

ಕೇರಳದಲ್ಲಿ ಶೇ.10ರಷ್ಟು ಸೋಂಕು ಇದೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಎರಡು ರಾಜ್ಯಗಳಿಗೂ ಗಡಿ ಸಂಪರ್ಕ ಇರುವುದರಿಂದ ನಮಗೆ ಆತಂಕ ಉಂಟಾಗಿದೆ. ಆದರೂ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ಗಮನ ಹರಿಸಿದ್ದೇವೆ ಎಂದು ಹೇಳಿದರು.

ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಕಡ್ಡಾಯವಾಗಿ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿರುವುದರಿಂದ ವಿಶೇಷ ಗಮನ ಹರಿಸಿದ್ದೇವೆ. ಅನಗತ್ಯವಾಗಿ ಜನತೆ ಆತಂಕಕ್ಕೆ ಒಳಗಾಗಬಾರದೆಂದು ಸುಧಾಕರ್ ಮನವಿ ಮಾಡಿದರು.

ಬೇರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗಡಿಗಳನ್ನು ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಏಕೆಂದರೆ ನಾವೆಲ್ಲರೂ ಭಾರತೀಯರು. ಇಂತಹ ಘಟನೆಗಳು ನಡೆದಾಗ ಆತಂಕ ಎದರಾಗುವುದು ಸಹಜ ಎಂದು ಹೇಳಿದರು. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಜಿನೋಬ್ ಪರೀಕ್ಷಾ ಪ್ರಯೋಗಾಲಯವನ್ನು 4 ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭ ಮಾಡಲಿದ್ದೇವೆ. ಇದೇ ರೀತಿ ಮಂಗಳೂರು ಮತ್ತು ವಿಜಾಪುರದಲ್ಲಿ ಡೆಲ್ಟಾ ಪ್ಲಸ್ ಟೆಸ್ಟಿಂಗ್ ಸೀಕೆನ್ಸ್ ಪತ್ತೆಗೆ ಪ್ರಯೋಗಾಲಯಗಳನ್ನು ಪ್ರಾರಂಭಿಸುವುದಾಗಿ ವಿವರಿಸಿದರು.

Facebook Comments

Sri Raghav

Admin