ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಆತಂಕ ಬೇಡ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಸಾರ್ವಜನಿಕರು ಹೆಚ್ಚು ಆತಂಕಗೊಳ್ಳಬಾರದು ಎಂದು ಹೇಳಿರುವ ಡಾ.ಕೆ.ಸುಧಾಕರ್ ತಕ್ಷಣವೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 3ನೆ ಪರಿವರ್ತಿತ ಅಲೆ ಡೆಲ್ಟಾ ಪ್ಲಸ್ ಸೋಂಕು ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕೆಂದು ಹೇಳಿದರು.

ಅನಗತ್ಯವಾಗಿ ಸಾರ್ವಜನಿಕರು ಈ ವೈರಸ್ ಬಗ್ಗೆ ಹೆಚ್ಚು ಆತಂಕ ಪಡಬೇಕಾದ ಅಗತ್ಯವಿಲ್ಲ. ಈ ಹಿಂದೆ ಒಂದು ಮತ್ತು ಎರಡನೆ ಕೋವಿಡ್ ಅಲೆ ಸಂದರ್ಭದಲ್ಲಿ ಯಾವ ರೀತಿ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗಿತ್ತೋ ಅದೇ ರೀತಿ ಈಗಲೂ ನಿಯಮಗಳನ್ನು ಪಾಲನೆ ಮಾಡಿದರೆ ಅಪಾಯದಿಂದ ಪಾರಾಗಬಹುದು ಎಂದು ಸಲಹೆ ಮಾಡಿದರು.
ಕೋವಿಡ್ ಲಸಿಕೆ ಪಡೆದರೆ ಯಾವುದೇ ರೀತಿಯ ಅಪಾಯ ಬರುವುದಿಲ್ಲ. ಲಸಿಕೆ ಪಡೆದ ತಕ್ಷಣ ಇದು ನಮ್ಮನ್ನು ಬಾಧಿಸುವುದೂ ಇಲ್ಲ ಎಂಬ ಬಗ್ಗೆಯೂ ಖಚಿತತೆ ಇಲ್ಲ. ಯಾರು ಲಸಿಕೆ ಪಡೆದಿಲ್ಲವೋ ಅಂತಹವರು ಕೂಡಲೇ ಲಸಿಕೆ ಪಡೆಯಬೇಕು ಎಂದು ಹೇಳಿದರು.

ಡೆಲ್ಟಾ ವೈರಸ್ ನಮ್ಮ ದೇಹ ಹೊಕ್ಕುವುದನ್ನು ತಡೆಗಟ್ಟಬೇಕಾದರೆ ಕೋವಿಡ್ ಲಸಿಕೆ ಪಡೆಯುವುದು ಅತ್ಯಂತ ಸೂಕ್ತ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಸ್ವರೂಪ ಒಂದೇ ಆಗಿದೆ. ಇದರ ಬಗ್ಗೆ ಸಾರ್ವಜನಿಕರು ಆತಂಕಗೊಂಡಿರುವುದು ಸತ್ಯ ಎಂಬುದನ್ನು ಸುಧಾಕರ್ ಒಪ್ಪಿಕೊಂಡರು.

ಮಕ್ಕಳಿಗೆ ಕೋವಿಡ್ ಲಸಿಕೆ ಅಗತ್ಯವಿಲ್ಲ ಎಂದು ಐಸಿಎಂಆರ್ ಹೇಳಿದೆಯಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನೂ ಅಧಿಕೃತವಾಗಿ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ತಜ್ಞರು, ಸಂಶೋಧಕರು ವೈರಸ್ ಬಗ್ಗೆ ಹೆಚ್ಚು ಸಂಶೋಧನೆ ನಡೆಸುತ್ತಿದ್ದಾರೆ. ಅಂತಿಮವಾಗಿ ಅವರು ನೀಡುವ ವರದಿ ಆಧಾರದ ಮೇಲೆ ಸರ್ಕಾರ ಮುನ್ನಡೆಯಲಿದೆ ಎಂದರು.
ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಪ್ರತಿಯೊಬ್ಬರನ್ನೂ ರಕ್ಷಣೆ ಮಾಡುವುದು ನಮ್ಮ ಮೂಲಭೂತ ಕರ್ತವ್ಯ. ಪೋಷಕರು ಕೂಡ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪದವಿ, ಡಿಪ್ಲೊಮಾ ಹಾಗೂ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಕಾಲೇಜುಗಳಿಂದ ಮಾಹಿತಿ ಪಡೆದು ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಕಾಲೇಜು ಆವರಣದಲ್ಲೇ ಲಸಿಕೆ ಕ್ಯಾಂಪ್ ಅಯೋಜಿಸಲಾಗುವುದು ಎಂದರು.

ಮತ್ತೊಬ್ಬರಿಗೆ ಸೋಂಕು: ರಾಜ್ಯದಲ್ಲಿ ಮತ್ತೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನ ಹಿರಿಯ ನಾಯಕರೊಬ್ಬರಿಗೆ ಈ ಸೋಂಕು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಐಸೊಲೇಟ್ ಮಾಡಲಾಗಿದೆ. ನಿನ್ನೆ ಮೈಸೂರಿನಲ್ಲಿ ಒಬ್ಬರಿಗೆ ಕಾಣಿಸಿಕೊಂಡಿತ್ತು. ಇದರಿಂದ ಪ್ರಕರಣಗಳ ಸಂಕ್ಯೆ 2ಕ್ಕೆ ಏರಿದೆ. ಹಿರಿಯ ನಾಗರಿಕರು ಆತಂಕ ಪಡಬಾರದು. ಸರ್ಕಾರ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

 

Facebook Comments