ಮತ್ತೊಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಬಳಿ ಪ್ರಬಲರ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

Congress-leaders

ನವದೆಹಲಿ, ಆ.30- ತಮ್ಮ ಆಪ್ತ ಬೆಂಬಲಿಗ ಜಿ.ಸಿ.ಚಂದ್ರಶೇಖರ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಪರಮೇಶ್ವರ್ ಅವರು ಇತ್ತೀಚೆಗೆ ನಿರ್ಗಮಿಸಿದ್ದು, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ.

ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ದಿನೇಶ್‍ಗುಂಡೂರಾವ್ ಅವರನ್ನು ನೇಮಿಸಲಾಗಿದೆ. ಬೀದರ್ ಜಿಲ್ಲೆಯ ಪ್ರಭಾವಿ ಲಿಂಗಾಯತ ಮುಖಂಡ ಈಶ್ವರ್ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಪಕ್ಷ ಸಂಘಟನೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಕ್ಕಿಲ್ಲ. ಹೀಗಾಗಿ ರಾಜ್ಯಸಭಾ ಸದಸ್ಯರಾಗಿರುವ ಜಿ.ಸಿ.ಚಂದ್ರಶೇಖರ್ ಅವರನ್ನು ಹಳೇ ಮೈಸೂರು ಕರಾವಳಿ ಭಾಗವನ್ನೊಳಗೊಂಡಂತೆ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಪರಮೇಶ್ವರ್ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರಿಗೆ ಮನವಿ ಮಾಡಿದ್ದಾರೆ.

ಜಿ.ಸಿ.ಚಂದ್ರಶೇಖರ್ ಅವರು ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರಾಹುಲ್‍ಗಾಂಧಿಯವರು ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಾಗ ನಡೆದ ಎಲ್ಲಾ ರ್ಯಾಲಿಗಳಲ್ಲಿ ಜಿ.ಸಿ.ಚಂದ್ರಶೇಖರ್ ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ. ಪಕ್ಷದ ಕಾರ್ಯದರ್ಶಿಯಾಗಿ, ಪ್ರಧಾನಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ ಎಂದು ಪರಮೇಶ್ವರ್ ರಾಹುಲ್‍ಗಾಂಧಿಯವರಿಗೆ ವಿವರಿಸಿದ್ದಾರೆ.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನೆನೆಗುದಿಗೆ ಬಿದ್ದಿದೆ. ನಿಗಮ ಮಂಡಳಿ ನೇಮಕಾತಿಗೆ ಗ್ರಹಣ ಹಿಡಿದಿದೆ. ಇದೆಲ್ಲಕ್ಕಿಂತಲೂ ಪರಮೇಶ್ವರ್ ಅವರು ತಮ್ಮ ಆಪ್ತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Facebook Comments

Sri Raghav

Admin