ಬೆಂಗಳೂರಿಗರಲ್ಲಿ ಆತಂಕ ಮೂಸಿಡಿದೆ ಡೇಂಜರ್ ಡೆಂಘೀ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ನಗರಕ್ಕೆ ಡೆಂಘೀ ಸೋಂಕು ಹೆಚ್ಚಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ನಗರದಾದ್ಯಂತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಡೆಂಘೀ ಸೋಂಕು ಕಾಣಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸುಮಾರು 1800ರಷ್ಟು ಡೆಂಘೀ ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವರ್ಷ ಈಗಾಗಲೇ 2000 ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಲಯ ಮಟ್ಟದಲ್ಲಿ ಕಳೆದ ಎರಡು ತಿಂಗಳಿನಿಂದ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಪೂರ್ವ ವಲಯದಲ್ಲಿ ಅತಿ ಹೆಚ್ಚು ಅಂದರೆ 653 ಡೆಂಘೀ ಪ್ರಕರಣಗಳು ದಾಖಲಾಗಿವೆ.

ಎಷ್ಟೆಷ್ಟು ಪ್ರಕರಣಗಳು: ಬೊಮ್ಮನಹಳ್ಳಿ ವಲಯದಲ್ಲಿ 104, ದಾಸರಹಳ್ಳಿ 38, ಪೂರ್ವ ವಲಯ 653, ಮಹದೇವಪುರ 342, ಆರ್‍ಆರ್ ನಗರ 122, ದಕ್ಷಿಣ 170, ಪಶ್ಚಿಮ 162 ಹಾಗೂ ಯಲಹಂಕ ವಲಯದಲ್ಲಿ 202 ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ.

ರೋಗ ತಡೆಗಟ್ಟಲು ಸಿದ್ಧತೆ: ನಗರದಾದ್ಯಂತ ಡೆಂಘೀ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಸೋಂಕು ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಎಂಟು ವಲಯಗಳಲ್ಲಿರುವ ಶಾಲಾ-ಕಾಲೇಜುಗಳ ಸುತ್ತಮುತ್ತಲ ಆವರಣ ಶುಚಿಯಾಗಿರುವಂತೆ ನೋಡಿಕೊಳ್ಳಲು ಆದ್ಯತೆ ನೀಡಲಾಗಿದೆ.

ಶಾಲಾ-ಕಾಲೇಜು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಹಿರಿಯ ಅಕಾರಿಗಳು ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಆರೋಗ್ಯಾಧಿಕಾರಿಗಳು ಶಾಲಾ-ಕಾಲೇಜು ಬಳಿ ತೆರಳಿ ಪರಿಶೀಲನೆ ನಡೆಸಬೇಕು. ಹಳ್ಳಗಳಲ್ಲಿ ನೀರು ನಿಂತಿರುವುದು ಕಂಡುಬಂದರೆ ಲಾರ್ವಿಸೈಡ್ ರಾಸಾಯನಿಕ ಸಿಂಪಡಣೆ ಹಾಗೂ ಫಾಗಿಂಗ್ ಮಾಡುವಂತೆ ಸೂಚಿಸಲಾಗಿದೆ.

ಅಧಿಕಾರಿಗಳು ವಲಯ ಮಟ್ಟದಲ್ಲಿ ಮನೆ ಮನೆಗೂ ತೆರಳಿ ಡೆಂಘೀ ಸೋಂಕು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಲಾಗಿದೆ.
ಸೊಳ್ಳೆ ಕಡಿತದಿಂದ ಅನಾರೋಗ್ಯ ಕಂಡುಬಂದರೆ ಕೂಡಲೇ ಸಾರ್ವಜನಿಕರು ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರು ತಮ್ಮ ಮನೆ ಆವರಣದಲ್ಲಿ ತೆಂಗಿನ ಚಿಪ್ಪು, ಪಾಟ್‍ಗಳು ಹಾಗೂ ಮತ್ತಿತರ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Facebook Comments