ದೇವನಹಳ್ಳಿ ಪೊಲೀಸರ ಭರ್ಜರಿ ಬೇಟೆ, 20ಲಕ್ಷಕ್ಕೂ ಅಧಿಕ ಬೆಲೆಬಾಳುವ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ದೇವನಹಳ್ಳಿ, ಸೆ.10- ಪಟ್ಟಣದ ವಿಜಯಪುರ ಕ್ರಾಸ್ ಬಳಿ ಎಲೆ, ಹೂ, ಕಾಂಡ, ಬೀಜಗಳನ್ನೊಳಗೊಂಡ ಗಾಂಜಾವನ್ನು ದೇವನಹಳ್ಳಿ ಪೋಲೀಸರು ವಶಪಡಿಸಿಕೊಂಡು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ ಎಂದು ಎ.ಸಿ.ಪಿ. ಪಿ.ಟಿ.ಸುಬ್ರಹ್ಮಣ್ಯ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಖಚಿತ ಮಾಹಿತಿಯ ಮೇರೆಗೆ ದೇವನಹಳ್ಳಿ-ವಿಜಯಪುರ ಕ್ರಾಸ್ ಬಳಿ ಸುಮಾರು 20ಲಕ್ಷ ರೂ.ಗಳ 41.2 ಕೆ.ಜಿ. ತೂಕದ ಗಾಂಜಾ ಹಾಗೂ ಸಾಗಿಸುತ್ತಿದ್ದ ತಮಿಳುನಾಡಿನ, ವೇಲೂರು ಜಿಲ್ಲೆ, ಕಂದಸ್ವಾಮಿನಗರದ ಸೆಲ್ವಂ ಮತ್ತು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಕಾವಲಪಲ್ಲಿ ಗ್ರಾಮದ ದೇವೇಂದ್ರ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಹೇಳಿದರು.

ಡಿಸಿಪಿ ಸಿ.ಕೆ. ಬಾಬಾ ಮಾರ್ಗದರ್ಶನದಲ್ಲಿ ದೇವನಹಳ್ಳಿ ಪೋಲಿಸ್ ಠಾಣೆ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮೊಹಮದ್ ರಫೀಕ್ ಹಾಗೂ ಪಿಎಸ್‍ಐಗಳಾದ ನಾಗರಾಜ್, ಕೆ.ಸಿ. ಸಾವಿತ್ರಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ರವಿ ಪಾಟೀಲ್, ವಿಜಯಕುಮಾರ್ ನಾಯಕ್, ತಯೂಬ್ ಹೊಂಗಲ್, ಇಸ್ಮಾಯಿಲ್ ಅವರ ತಂಡ ಅಪರಾಧಿಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ. ಈಶಾನ್ಯ ವಿಭಾಗದ ಉಪ ಪೋಲಿಸ್ ಆಯುಕ್ತರು ದೇವನಹಳ್ಳಿಯ ಪೋಲೀಸರನ್ನು ಪ್ರಶಂಸಿದ್ದಾರೆ.

Facebook Comments