ಕೊರೋನಾ ಲಸಿಕೆಯನ್ನು ಗ್ರಾಪಂ ಮಟ್ಟಕ್ಕೆ ತಲುಪಿಸಲು ಜಾಲ ರಚನೆಗೆ ಗೌಡರ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಕೊರೋನಾ ಲಸಿಕೆಯನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ತಲುಪಿಸಲು ವ್ಯವಸ್ಥಿತವಾದ ವೈದ್ಯಕೀಯ ಮತ್ತು ಅರೆ ವÉೈದ್ಯಕೀಯ ಕಾರ್ಯಕರ್ತರ ಜಾಲವೊಂದನ್ನು ರಚಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಸಿಕೆ ಹಂಚಿಕೆ ಸಂಬಂಧಪಟ್ಟಂತೆ ನಡೆಸಿದ ವರ್ಚುವಲ್ ಸಭೆಯಲ್ಲಿ ದೇವೇಗೌಡರು ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ನಾಲ್ಕು ಸಲಹೆಗಳನ್ನು ನೀಡಿದ್ದಾರೆ.

ಭಾರತದಲ್ಲಿ ಲಸಿಕೆ ಸಂಗ್ರಹ ಮತ್ತು ಸಾಗಾಣಿಕೆ ದೊಡ್ಡ ಸವಾಲಾಗಿದೆ. ಈ ವಿಷಯವಾಗಿ ನೇರವಾಗಿ ಪ್ರಧಾನಿ ಕಚೇರಿಯೊಂದಿಗೆ ಸಂಪರ್ಕ ಹೊಂದಿರುವ ಉನ್ನತಮಟ್ಟದ ತಂಡವೊಂದನ್ನು ರಚಿಸಬೇಕು. ಜೊತೆಗೆ ಗ್ರಾಪಂ ಮಟ್ಟದವರೆಗೂ ಸಂಪರ್ಕ ಹೊಂದಿರುವ ಸರ್ಕಾರದ ಯೋಜಿತ ಜಾಲವೊಂದನ್ನು ಸೃಷ್ಟಿಸಬೇಕೆಂದು ಸಲಹೆ ನೀಡಿದ್ದಾರೆ.

ಲಸಿಕೆಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ದೊಡ್ಡ ಪ್ರಮಾಣದ ಶೈತ್ಯಾಗಾರಗಳ ಅಗತ್ಯವಿದೆ. ಈ ಸವಾಲನ್ನು ಎದುರಿಸಲು ಪ್ರಧಾನಿ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿಎಸ್)ಯ ಸಲಹೆ ಪಡೆಯಬೇಕು. ಸಾಮಾನ್ಯ ಕೊಠಡಿಗಳನ್ನು ಶೈಥಲೀಗಾರಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಲಸಿಕೆಯ ದರ ಜನ ಸಾಮಾನ್ಯರ ಕೈಗೆಟುಕುವಂತಿರಬೇಕು. ಸರ್ಕಾರ ದುರ್ಬಲ ವರ್ಗದವರಿಗೆ ಉಚಿತವಾಗಿ ಲಸಿಕೆ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ. ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆಯೇ ಅಥವಾ ರಾಜ್ಯ ಸರ್ಕಾರದ ಪಾಲು ಇದೆಯೇ ಎಂದೂ ಪ್ರಶ್ನಿಸಿರುವ ಅವರು, ವಿದೇಶದಿಂದ ನಾವು ಲಸಿಕೆಯನ್ನು ಖರೀದಿ ಮಾಡುತ್ತಿದ್ದೇವೆ. ನಮಲ್ಲಿಯೇ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಸಾಮಥ್ರ್ಯವಿಲ್ಲವೇ. ಮೂರನೇ ಹಂತದ ಪ್ರಯೋಗಕ್ಕೆ ಒಳಗಾದ ಲಸಿಕೆ ಸುರಕ್ಷಿತವಾಗಿರುತ್ತದೆಯೇ ಮತ್ತು ಅದರ ಸಾಮಥ್ರ್ಯ ನಂಬಲಾರ್ಹವೇ ಎಂದು ಪ್ರಶ್ನಿಸಿದ್ದಾರೆ.

ಮೊದಲ ಹಂತದಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದೂ ಕೂಡಾ ದೇವೇಗೌಡರು ಪ್ರಶ್ನಿಸಿದ್ದು,ಅನಪೇಕ್ಷಿಯವಾಗಿ ಸೃಷ್ಟಿಯಾದ ಕೋವಿಡ್ ಸಂಕಷ್ಟವನ್ನು ಶೀಘ್ರ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ತೆಗೆದುಕೊಳ್ಳುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ.

Facebook Comments