ಜಿ.ಪಂ, ತಾ.ಪಂ. ಚುನಾವಣೆಗೆ ಸಜ್ಜಾಗಿ : ದೇವೇಗೌಡರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ಎಲ್ಲರೂ ಐಕ್ಯತೆಯಿಂದ ಎದುರಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಹೇಳಿದರು. ನಗರದ ಜೆಪಿ ಭವನದಲ್ಲಿಂದು ನಡೆದ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟೇ ಕಷ್ಟವಿದ್ದರೂ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಹೋರಾಟ ಮಾಡಿ ಸಾಧನೆ ಮಾಡಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಮಾಡಬೇಕು. ಸಮಿತಿ ರಚನೆ ಬಗ್ಗೆಯೂ ಚರ್ಚೆ ಮಾಡಬೇಕಿದೆ. ಪ್ರತಿಜಿಲ್ಲೆಯಿಂದ ಒಬ್ಬೊಬ್ಬರು ಪಕ್ಷ ಸಂಘಟನೆ, ಪ್ರಸಕ್ತ ವಿದ್ಯಮಾನದ ಬಗ್ಗೆ ಮಾತನಾಡಿ ಎಂದು ಸಲಹೆ ಮಾಡಿದರು.

ಪ್ರತಿ ಜಿಲ್ಲೆಯಲ್ಲೂ ಪಕ್ಷ ಕಟ್ಟುವ, ಹೋರಾಟ ಮಾಡುವ ಕಾರ್ಯಕರ್ತರಿದ್ದಾರೆ. ಇತ್ತೀಚೆಗೆ ಹಾಸನ, ಮೈಸೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಕ್ಷ ಮೊದಲ ಸ್ಥಾನ ಗಳಿಸಿದೆ. ರಾಯಚೂರು, ಬೀದರ್ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚು ಸ್ಥಾನ ಗೆದ್ದಿದ್ದಾರೆ. ಕೆಲವು ಜಿಲ್ಲೆಗಳಲ್ಲಿ 3ನೇ ಸ್ಥಾನಕ್ಕೆ ತಲುಪಿದ್ದಾರೆ.

ತಾಪಂ, ಜಿಪಂ ಚುನಾವಣೆಗೆ ಬಿ ಫಾರಂ ಮತ್ತು ಎ ಫಾರಂ ಕೊಡುತ್ತೇವೆ. ಮುಕ್ತವಾಗಿ ಚರ್ಚೆ ಮಾಡೋಣ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಸರಿಪಡಿಸೋಣ. ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು ಎಂಬ ಗುರಿ ಇಟ್ಟುಕೊಳ್ಳೋಣ ಎಂದರು. ಈ ಸಭೆಯನ್ನು ಅರಮನೆ ಮೈದಾನದಲ್ಲಿ ಮಾಡಲು ಉದ್ದೇಶಿಸಲಾಗಿತ್ತು. ಬ್ರಿಟನ್ ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿ ಕೊಡುವುದಿಲ್ಲ ಎಂದು ಇಲ್ಲೇ ಸಮಾರಂಭ ಮಾಡಬೇಕಾಯಿತು ಎಂದರು.

ಮೈತ್ರಿ ಸರ್ಕಾರ ಏಕೆ ಪತನವಾಯಿತು ಎಂಬ ಚರ್ಚೆ ಬೇಡ. ಬಿಎಸ್‍ವೈ ಸರ್ಕಾರದ ಬಗ್ಗೆಯೂ ಚರ್ಚಿಸುವುದು ಬೇಡ. ಪೂರ್ಣ ಸಮಯವನ್ನು ಪಕ್ಷ ಕಟ್ಟಲು ಬಳಕೆ ಮಾಡೋಣ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ವಯಕ್ತಿಕ ಭಿನ್ನಾಭಿಪ್ರಾಯವನ್ನು ಪ್ರಸ್ತಾಪಿಸುವುದು ಬೇಡ. ತಳಮಟ್ಟದಿಂದ ಪಕ್ಷವನ್ನು ಬಲಗೊಳಿಸುವುದು ಈಗಿನ ಪರಿಸ್ಥಿತಿ ಬಗ್ಗೆ ಚರ್ಚಿಸಿ ಲೋಪ ದೋಷಗಳ ಬಗ್ಗೆ ಅಭಿಪ್ರಾಯ ನೀಡಿ ಎಂದರು.

ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್‍ಕುಮಾರಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಎನ್.ಎಂ.ನಭಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments