ರಾಷ್ಟ್ರ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26-ನಮ್ಮ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಬದಲು ಸಂಘರ್ಷದ ಮಾರ್ಗ ಹಿಡಿಯುತ್ತಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.  ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳುವ ವಾತಾವರಣವಿಲ್ಲ. ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದರು.

ಆರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಏನೇ ಕಷ್ಟಬಂದರೂ ಜೆಡಿಎಸ್ ವತಿಯಿಂದ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.  ಇಡೀ ವಿಶ್ವವನ್ನೇ ತೀವ್ರವಾಗಿ ಕಾಡಿದ್ದ ಕೋವಿಡ್-19ಕ್ಕೆ ನಮ್ಮ ದೇಶದ ವಿಜ್ಞಾನಿ, ಸಂಶೋಧಕರು ಲಸಿಕೆ ಕಂಡುಹಿಡಿದು ಗೌರವ ತರುವ ಕೆಲಸ ಮಾಡಿದ್ದಾರೆ. ಹೊರ ರಾಷ್ಟ್ರಗಳಲ್ಲೂ ಲಸಿಕೆಗೆ ಬೇಡಿಕೆ ಬಂದಿರುವುದು ಹೆಮ್ಮೆಯ ವಿಚಾರ. ಇದರ ಕೀರ್ತಿ ಆ ವಿಜ್ಞಾನಿಗಳಿಗೆ ಸಲ್ಲಬೇಕು ಎಂದರು.

ಮುಂಬರುವ ರಾಜ್ಯಸಭೆ ಅಧಿವೇಶನದಲ್ಲಿ ಭಾಗವಹಿಸುವ ಸಂಕಲ್ಪ ಮಾಡಿದ್ದೇನೆ. ಪೆಟ್ರೋಲ್, ಡೀಸೆಲ್, ದಿನಬಳಕೆ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ನಮ್ಮ ಪಕ್ಷದ ಧ್ವನಿ ಎತ್ತಲಿದೆ ಎಂದು ಹೇಳಿದರು.  ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾದಾಗ ತಮ್ಮ ಆಕ್ಷೇಪ ವ್ಯಕ್ತಪಡಿಸಿ ರೈತರಿಗೆ ಯಾವ ರೀತಿ ಮಾರಕವಾಗಲಿದೆ ಎಂಬುದನ್ನು ಉಲ್ಲೇಖ ಮಾಡಿದ್ದೇನೆ. ತರಾತುರಿಯಲ್ಲಿ ವಿಧೇಯಕವನ್ನು ಪಾಸ್ ಮಾಡಿಕೊಳ್ಳಲಾಗಿದೆ. ಎರಡು ತಿಂಗಳ ಕಾಲ ಮುಂದೂಡಿ ಜಂಟಿ ಸದನ ಸಮಿತಿ ಇದರ ಬಗ್ಗೆ ವ್ಯಾಪಕ ಚರ್ಚೆಯಾಗಲಿ ಎಂದು ಹೇಳಿದರೂ ತಮ್ಮ ಮಾತನ್ನು ಪರಿಗಣಿಸಲಿಲ್ಲ ಎಂದರು.

ದೆಹಲಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ರೈತರ ಪ್ರತಿಭಟನೆ ಪಕ್ಷಾತೀತವಾಗಿದೆ. ನಮ್ಮ ರಾಜ್ಯದಲ್ಲೂ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ರೈತರ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕು. ನಾವು ಕಾಂಗ್ರೆಸ್ ಜೊತೆ ಪೈಪೋಟಿ ಮಾಡುವುದಿಲ್ಲ. ನಮ್ಮ ಪಕ್ಷ ಬಡವರ ಮತ್ತು ರೈತರ ಪರವಾದ ಪಕ್ಷವಾಗಿದೆ.

ನಿರಂತರವಾಗಿ ರೈತರಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸಲಾಗುವುದು. ರಾಜ್ಯದ 30 ಜಿಲ್ಲೆಗಳಿಂದಲೂ ಆ ಸಮಾವೇಶಕ್ಕೆ ಕಾರ್ಯಕರ್ತರು ಬರುತ್ತಾರೆ. ಜನಸಾಮಾನ್ಯರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು. ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೂ ಸಿದ್ದತೆ ಮಾಡಿಕೊಳ್ಳಬೇಕಿದೆ. ಪಕ್ಷದ ವಿವಿಧ ಘಟಕಗಳ ಪುನಾರಚನೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

# ಹೊರಟ್ಟಿ ನೇತೃತ್ವದಲ್ಲಿ ಸಭೆ:
ವಿಧಾನಪರಿಷತ್‍ನ ಉಪಸಭಾಪತಿ ಚುನಾವಣೆ ಸಂಬಂಧಿಸಿದಂತೆ ಪಕ್ಷ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಮಾಜಿ ಸಚಿವ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನಾಳೆ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯರು ಹೊರಟ್ಟಿ ನೇತೃತ್ವದಲ್ಲಿ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಹಾಸನ ವಿಮಾನ ನಿಲ್ದಾಣ ಹಾಗೂ ಚನ್ನಪಟ್ಟಣ ಕೆರೆಗೆ ಸಂಬಂಧಿಸಿದ ಕಾಮಗಾರಿಗಳಲ್ಲದೆ ಶಾಸಕರ ಕ್ಷೇತ್ರಗಳ ಅನುದಾನ ಬಿಡುಗಡೆಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆಸಬೇಕಾಗಿದ್ದ ಪ್ರತಿಭಟನೆಯನ್ನು ಕೈಬಿಡಬೇಕಾಯಿತು ಎಂದರು.

ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ನಾರಾಯಣರಾವ್ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಮತ್ತು ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments