ಬರ-ನೆರೆಗೆ ಅನುದಾನ ಬಿಡುಗಡೆ ಮಾಡದ ಮೋದಿ ವಿರುದ್ಧ ಗೌಡರು ಗರಂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.15- ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತೀವ್ರ ಅಸಮಾಧಾನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಕ್ತಪಡಿಸಿದರು. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ರಾಜ್ಯದಲ್ಲಿ ಉಂಟಾಗಿರುವ ದೊಡ್ಡ ಪ್ರಮಾಣದ ನೆರೆ ಹಾವಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಭೆ ಕೂಡ ಮಾಡಿಲ್ಲ. ಹಣವನ್ನೂ ನೀಡಿಲ್ಲ. ಅವರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ.ಇಲ್ಲಿಯವರೆಗೂ ರಾಜ್ಯಕ್ಕೆ ಒಂದು ರೂಪಾಯಿಯೂ ಕೇಂದ್ರದಿಂದ ಬಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನೆರೆ ಹಾವಳಿ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಿದ್ದು, ಆನಂತರ ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗುತ್ತದೆ. ಆಗಲೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಖುದ್ದಾಗಿ ಪ್ರಧಾನಿಯವರನ್ನು ಭೇಟಿ ಮಾಡುವುದಾಗಿ ಗೌಡರು ಹೇಳಿದರು. ಒಂದು ವೇಳೆ ರಾಜ್ಯ ಸರ್ಕಾರ ನೆರವಿಗಾಗಿ ಪ್ರಧಾನಿ ಬಳಿಗೆ ನಿಯೋಗ ಕರೆದೊಯ್ದರೂ ಹೋಗುವುದಾಗಿ ಹೇಳಿದರು.

ಈಗಾಗಲೇ ಪ್ರಧಾನಿಯವರಿಗೆ ಮಧ್ಯಂತರ ಪರಿಹಾರ ನೀಡುವಂತೆ ಪತ್ರ ಬರೆದಿದ್ದು, ಅಗತ್ಯಬಿದ್ದರೆ ಮತ್ತೊಂದು ಪತ್ರ ಬರೆಯಲಾಗುವುದು ಎಂದರು. ಪ್ರವಾಹ ಪರಿಸ್ಥಿತಿ ಕಡಿಮೆಯಾದ ನಂತರ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಡುವುದಾಗಿ ತಿಳಿಸಿದರು. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಉಂಟಾಗಿದೆ.

ರೈತರು, ಸಾಮಾನ್ಯ ಜನರು ಸಂಕಷ್ಟದಲ್ಲಿದ್ದಾರೆ. ಸಾವು-ನೋವುಗಳಾಗಿವೆ. ನಮ್ಮ ರಾಜ್ಯ ಸರ್ಕಾರ ಕೂಡ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಎಲ್ಲರೂ ಒಟ್ಟಾಗಿ ಇಂತಹ ಸಂದರ್ಭದಲ್ಲಿ ಕೆಲಸ ಮಾಡಬೇಕಿದೆ ಎಂದರು.

ಕಾಶ್ಮೀರಲ್ಲಿ ಸಂವಿಧಾನದ 371ನೆ ವಿಧಿ ರದ್ದಾಗಿರುವುದರಿಂದ ಸ್ವಲ್ಪ ಬಿಕ್ಕಟ್ಟು ಉಂಟಾಗಿದೆ. ಕಾಶ್ಮೀರದ ಜನರ ವಿಶ್ವಾಸವನ್ನು ತೆಗೆದುಕೊಳ್ಳದಿದ್ದರೆ ಬಿಕ್ಕಟ್ಟು ಮುಂದುವರಿಯುತ್ತದೆ. ಹೀಗಾಗಿ ಅಲ್ಲಿನ ಜನರನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಗೊಂದಲದಲ್ಲಿರುವವರನ್ನು ಬಿಡುಗಡೆ ಮಾಡಬೇಕು. ಹೆಚ್ಚು ಸೇನೆಯನ್ನು ನಿಯೋಜಿಸಿ ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ.

ಸಹಬಾಳ್ವೆಯ ಬದುಕು ನಡೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು. ಇಂತಹ ಬಿಕ್ಕಟ್ಟನ್ನು ಹೆಚ್ಚು ದಿನಗಳ ಕಾಲ ಮುಂದುವರಿಸಬಾರದು ಎಂದು ಸಲಹೆ ಮಾಡಿದರು. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮೂರು ತಿಂಗಳಲ್ಲಿ ಐದು ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರ ಹೇಳುವುದೊಂದು, ಮಾಡುವುದೊಂದು ಆಗಿದೆ. ಮಕ್ಕಳ ಅಪೌಷ್ಟಿಕತೆ, ರೈತರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ 73ನೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.

ಇದಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ಮುಖಂಡ ಎಂ.ಎಸ್.ನಾರಾಯಣರಾವ್, ಈಗಾಗಲೇ ಒಮ್ಮೆ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ನೋಡಿದ್ದೇವೆ. ಮತ್ತೊಮ್ಮೆ ಅಂತಹ ಪರಿಸ್ಥಿತಿ ಬರುವ ಸನ್ನಿವೇಶ ಕಾಣುತ್ತಿದೆ. ಅದನ್ನು ತಡೆಯಲು ದೇವೇಗೌಡರೇ ನೇತೃತ್ವ ವಹಿಸಿಕೊಳ್ಳಬೇಕು. ಎಲ್ಲ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಹೋರಾಟ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Facebook Comments