ಪಾಕ್ ಪರ ಘೋಷಣೆ ಸರಿಯಲ್ಲ : ಎಚ್‍ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಫೆ.22- ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿಚಾರದ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಿದ್ದೇನೆ. ಆಕೆಯ ಘೋಷಣೆ ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್‍ಡಿ. ದೇವೇಗೌಡರು ಹೇಳಿದ್ದಾರೆ.

ಶಿವರಾತ್ರಿಯ ಜಾಗರಣೆಯ ಸಲುವಾಗಿ ಬೆಂಗಳೂರಿನಿಂದ ಹುಟ್ಟೂರು ಹರದನಹಳ್ಳಿಗೆ ತೆರಳುವ ಸಂದರ್ಭದಲ್ಲಿ ವಿಶ್ರಾಂತಿಗೆಂದು ಹಾಸನದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ಸರಿಯಲ್ಲ. ಪೊಲೀಸರು ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಆ ಹೆಣ್ಣು ಮಗು ಈ ರೀತಿ ಹೇಳಿತು ಅನ್ನೋದು ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ವಿಚಾರಣೆ ನಡೆಯುತ್ತಿದೆ. ಇದರ ಜೊತೆಗೆ ಮತ್ತೋರ್ವ ಯುವತಿ ಕಾಶ್ಮೀರ್ ಮುಕ್ತ ಎಂಬ ಫಲಕ ಹಿಡಿದಿರುವ ಬಗ್ಗೆಯೂ ಗಮನಿಸಿದ್ದೇನೆ. ಇದರ ಹಿನ್ನೆಲೆ ಕೂಡ ಏನ್ ಇರುತ್ತೋ ಗೊತ್ತಿಲ್ಲ ಎಂದು ಬೇಸರದಿಂದಲೇ ದೇವೇಗೌಡರು ಪ್ರತಿಕ್ರಿಯಿಸಿದರು. ಇಂತಹ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ಅವರ ಕರ್ತವ್ಯ, ಈಗಾಗಲೇ ಅಮೂಲ್ಯ ಮನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ರವಿಕೃಷ್ಣ ರೆಡ್ಡಿ ಹೋಗಿಬಂದಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿದ್ದೇನೆ.

ವಿಚಾರಣೆ ಬಳಿಕ ಸತ್ಯಾಂಶ ಹೊರಬರಲಿದೆ. ನಂತರ ನಾನು ಮಾತನಾಡುತ್ತೇನೆ ಎಂದರು. ಇನ್ನು, ಅಮೆರಿಕ ಅಧ್ಯಕ್ಷ ಟ್ರಂಪ್ ಗುಜರಾತ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಬಗ್ಗೆ ನಾನು ಈಗ ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.

Facebook Comments