ಸಾಮಾನ್ಯ ರೈತನ ಮಗ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ದೇವೇಗೌಡರು ಸಾಕ್ಷಿ: ನಿರ್ಮಲಾನಂದನಾಥ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ಜನರ ಒಳಿತಾಗಿ ಹಗಲು-ರಾತ್ರಿ ಹೋರಾಟ ಮಾಡುತ್ತಾ ದಿನದ 24 ಗಂಟೆಯೂ ಸಮಾಜಮುಖಿ ಚಿಂತನೆ ಮಾಡುವ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ‌.ದೇವೇಗೌಡರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದ್ದಾರೆ. ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿ ಇಪ್ಪತ್ತೈದು ವರ್ಷವಾಗಿರುವ ಹಿನ್ನೆಲೆಯಲ್ಲಿ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಸೇವೆ ಮಾಡಲು ರಾಜಕಾರಣ ಉತ್ತಮ ಮಾರ್ಗ. ಅದರ ಪಾವಿತ್ರ್ಯತೆ ಅರಿತು ಜನ ಸಾಮಾನ್ಯರಿಗೆ ಸಲ್ಲಬೇಕಾಗಿರುವ ನ್ಯಾಯ, ಸೇವೆ ಸಲ್ಲಿಸುವ ಗುಣವನ್ನು ಯುವ ಸಮುದಾಯ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಹಿರಿಯರಾದ ದೇವೇಗೌಡರು ರಾಜಕಾರಣ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಬದುಕಿನಲ್ಲಿ ಒಳ್ಳಿತು, ಕೆಡುಕುಗಳನ್ನು ಭಗವಂತನ ಇಚ್ಛೆಯೆಂದು ಭಾವಿಸಿ ಸ್ಥಿತಪ್ರಜ್ಞರಾಗಿರುವವರು ಗೌಡರು. ಅವರು ಪ್ರಧಾನಿಯಾಗಿ 25 ವರ್ಷವಾಗಿದೆ. ಸಾಮಾನ್ಯ ರೈತನ ಮಗ ಹಳ್ಳಿಯಿಂದ ದಿಲ್ಲಿವರೆಗೂ ಹೋರಾಟ ಮತ್ತು ಸಾಧನೆ ಮಾಡಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಾಜದ ಎಲ್ಲ ಓರೆ, ಕೋರೆಗಳನ್ನು ನೋಡಿದ ವ್ಯಕ್ತಿಗೆ ಅಧಿಕಾರ ಕೊಟ್ಟರೆ, ಜನರ ಪರವಾಗಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ದೇವೇಗೌಡರು ಸಾಕ್ಷಿ ಎಂದಿದ್ದಾರೆ‌‌.

ಶೇ.75 ರಷ್ಟು ಜನ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ. ಯಾವುದೇ ದೇಶ ಬಹುಸಂಖ್ಯಾತರನ್ನು ಕಡೆಗಣಿಸಿದರೆ ಪ್ರಗತಿ ಕಷ್ಟ‌. ಗೌಡರು ತಮ್ಮ ಅಧಿಕಾರದ ಅವಧಿಯಲ್ಲಿ ರೈತಪರ ಹಲವು ಯೋಜನೆ ರೂಪಿಸಿ ಜಾರಿಗೆ ತಂದವರು. ಅಧಿಕಾರದಲ್ಲಿ ಗೌಡರು ಮುಂದುವರೆದಿದ್ದರೆ ಗಂಗಾ- ಕಾವೇರಿ ನದಿ ಜೋಡಣೆ ಕನಸ್ಸು ನನಸು ಮಾಡುತ್ತಿದ್ದರು ಎಂದು ಸ್ವಾಮೀಜಿ ಅವರು ಹೇಳಿದ್ದಾರೆ‌.

ಉತ್ತರ ಕರ್ನಾಟಕ ಭಾಗದ ಆಲಮಟ್ಟಿ ಜಲಾಶಯಕ್ಕೂ ಅವರ ಕೊಡುಗೆ ಸಾಕಷ್ಟಿದೆ. ಪಂಜಾಬಿನಲ್ಲಿ ಬತ್ತದ ತಳಿಗೆ ದೇವೇಗೌಡರ ಹೆಸರು ಇಟ್ಟಿದ್ದಾರೆ. ಪ್ರಧಾನಿಯಾದರೂ ನಾಗಲೋಟದಲ್ಲಿ ಓಡುತ್ತಿರುವ ಕಂಪ್ಯೂಟರ್, ಕೈಗಾರಿಕಾ ಹಾಗೂ ನ್ಯೂಕ್ಲಿಯರ್ ಯುಗದಲ್ಲಿ ಕೃಷಿ ಕ್ಷೇತ್ರ ಕಡೆಗಣಿಸಲಿಲ್ಲ. ಹಾಗೆಯೇ ದೇಶದ ಆರ್ಥಿಕ ಸುಧಾರಣೆಗೆ ಕೈಗಾರಿಕೆ ಅಗತ್ಯವೆಂದು ಸಾಕಷ್ಟು ಒತ್ತುಕೊಟ್ಟಿದ್ದರು. ವಿಮಾನಯಾನಕ್ಕೆ ಸಂಬಂಧಿಸಿದ ನಿಯಮ ಸರಳೀಕರಿಸಿದ್ದರಿಂದ ಸಾಮಾನ್ಯ ವ್ಯಕ್ತಿಯೂ ವಿಮಾನ ಪ್ರಯಾಣ ಮಾಡುವಂತಾಗಿದೆ. ದೆಹಲಿ ಮೆಟ್ರೋ ಯೋಜನೆ ಪರಿಕಲ್ಪನೆ ಗೌಡರದ್ದು. ಬೆಂಗಳೂರಲ್ಲಿ ಐಟಿ ಕನಸು ಕಂಡವರು, ಮಹಿಳಾ ಮೀಸಲಾತಿ ಜಾರಿಗೆ ತಂದವರು ಎಂದು ಅವರು ಹೇಳಿದ್ದಾರೆ.

ನಮ್ಮ ದೇಶ ಮತ್ತು ನಮ್ಮ ಸಮುದಾಯ ಹೆಮ್ಮೆಪಡುವಂತೆ ಮಾಡಿದ ನಿಜವಾದ ಮಣ್ಣಿನಮಗ ಅತ್ಯುನ್ನತ ಅಧಿಕಾರ ಕೇಂದ್ರ ಸ್ಥಾನವನ್ನು ಅಲಂಕರಿಸಿದರೂ ಇನ್ನೊಬ್ಬರಿಗಾಗಿ ಮಿಡಿಯುವ, ಮಾನವೀಯತೆ, ವಿನಮ್ರತೆ, ಮೃಧುಸ್ವಭಾವ ಹಾಗೂ ತಾಳ್ಮೆಯ ಹಾದಿಯನ್ನು ಎಂದಿಗೂ ತೊರೆಯಲಿಲ್ಲ ಗೌಡರು ಎಂದು ಸ್ವಾಮೀಜಿ ತಿಳಿಸಿದ್ದಾರೆ.

ದೇಶ ಮತ್ತು ಸಮಾಜಕ್ಕಾಗಿ ಅವರು ಹೊಂದಿರುವ ಬದ್ಧತೆ, ಕಾಳಜಿಯನ್ನು ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡುವಂಥದ್ದಲ್ಲ. ಎಷ್ಟೇ ಎತ್ತರದ ಅಥವಾ ಅತ್ಯುನ್ನತ ಅಧಿಕಾರ ಹೊಂದಿದ್ದರೂ ಅವರು ಸರಳವಾಗಿದ್ದರು. ಆ ಅಧಿಕಾರವು ಬಡವರು, ದೀನದಲಿತರ ಕಲ್ಯಾಣದ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ಬದಲಾಯಿಸಲಿಲ್ಲ ಎಂದಿದ್ದಾರೆ.

ಎಚ್.ಡಿ.ದೇವೇಗೌಡರಿಗೆ ಶ್ರೀ ಕಾಲಭೈರವ ದೇವರ ಅನುಗ್ರಹ ಹಾಗೂ ನಮ್ಮ ಪೂಜ್ಯ ಗುರುಗಳ ಆಶೀರ್ವಾದ ಸದಾಕಾಲ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Facebook Comments