ಸಿದ್ದರಾಮಯ್ಯ ಬೆಂಬಲಿಗರ ಬಾಯಿಗೆ ಬೀಗ ಹಾಕುವಂತೆ ರಾಹುಲ್‌ಗೆ ಗೌಡರ ದೂರು ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11-ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಬೆಂಗಲಿಗರಿಂದಲೇ ಕಿರಿಕಿರಿಯಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೈಕಮಾಂಡ್‍ಗೆ ದೂರು ನೀಡಿದ್ದಾರೆ.

ನಿನ್ನೆ ನವದೆಹಲಿಗೆ ತೆರಳಿದ ದೇವೇಗೌಡರು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸುಮಾರು ಅರ್ಧಗಂಟೆಗಳ ಮಾತುಕತೆ ವೇಳೆ ದೇವೇಗೌಡರು ರಾಜ್ಯ ರಾಜಕಾರಣದ ಸಮಗ್ರ ವಿವರ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸೊರಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಇದಕ್ಕೆ ಕಾಂಗ್ರೆಸ್ ನಾಯಕರೇ ಪರೋಕ್ಷ ಬೆಂಬಲ ನೀಡಿರುವುದು ಕಾರಣವಾಗಿದೆ ಎಂದಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಬಿಜೆಪಿಯನ್ನು ಬೆಂಬಲಿಸಿದರು. ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಪರಿಸ್ಥಿತಿಯನ್ನು ಹದಗೊಳಿಸುವ ಪ್ರಯತ್ನವನ್ನು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾಡಲಿಲ್ಲ ಎಂದು ದೇವೇಗೌಡರು ದೂರಿದ್ದಾರೆ.

ಸಂಪುಟ ಸೇರಲು ಬಹಳಷ್ಟು ಮಂದಿಗೆ ಆಸೆ ಇರುತ್ತದೆ. ಆದರೆ, ಸಿದ್ದರಾಮಯ್ಯ ಅವರ ಬೆಂಬಲಿಗರು ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರಕ್ಕೆ ಮುಜುಗರ ನೀಡಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿಯ ಜತೆ ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಇದರಿಂದಾಗಿ ಸಮ್ಮಿಶ್ರ ಸರ್ಕಾರದ ಮೇಲೆ ಅಪನಂಬಿಕೆಗಳು ಉಂಟಾಗುತ್ತಿವೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಮಾಡುತ್ತಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಪಾಠ ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಪರಸ್ಪರ ರಾಜಕೀಯ ದ್ವೇಷ ಸಾಧಿಸುತ್ತಾ ಹೋದರೆ ಸರ್ಕಾರವನ್ನು ಕಳೆದುಕೊಳ್ಳುತ್ತೇವೆ. ಬಿಜೆಪಿ ಪಕ್ಷ ಬಲಗೊಳ್ಳಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ದೇವೇಗೌಡರು ರಾಹುಲ್‍ಗಾಂಧಿಗೆ ವಿವರಿಸಿದ್ದಾರೆ.

ಜೆಡಿಎಸ್ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಾವ ಸವಾಲಿಗಾದರೂ ಸಿದ್ದ. ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ತಮ್ಮ ಪಾಲಿನ ಎರಡು ಸ್ಥಾನಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ಸಿದ್ದವಿದೆ ಎಂದು ಗೌಡರು ಹೇಳಿದ್ದು, ಅದಕ್ಕೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ನಿಗಮ ಮಂಡಳಿ ನೇಮಕಾತಿ, ರಾಜ್ಯಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‍ಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಅವರುಗಳನ್ನು ಸಮಾಧಾನಪಡಿಸಲು ಹಿರಿಯ ನಾಯಕರುಗಳನ್ನು ಕಾಂಗ್ರೆಸ್‍ನ ಚುಕ್ಕಾಣಿಗೆ ನೇಮಿಸುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ.

ಇನ್ನು ಎರಡು-ಮೂರು ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾಗವಹಿಸುವಂತೆ ದೇವೇಗೌಡರು ರಾಹುಲ್‍ಗಾಂಧಿಗೆ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin