ಅನುದಾನ ಮಂಜೂರಾದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ಶಾಸಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.12- ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವೇ ಪ್ರಮುಖ ಅನುದಾನವಾಗಿದೆ. ಆದರೆ ಅನುದಾನ ಮಂಜೂರಾದರೂ ಅದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಶಾಸಕರ ನಿರಾಸಕ್ತಿ ಮುಂದುವರಿದಿದೆ. ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಶಾಸಕರ ನಿಧಿ) ಪ್ರತಿ ಶಾಸಕರಿಗೆ ಸಿಗುವ ಪ್ರಮುಖ ಅನುದಾನವಾಗಿದೆ.

ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ವಾರ್ಷಿಕ 2 ಕೋಟಿ ರೂ. ಅನುದಾನ ನೀಡುತ್ತದೆ.

ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ(ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಮುದಾಯ ಭವನ, ಗ್ರಾಮೀಣ ರಸ್ತೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಆಸ್ಪತ್ರೆ ಕಟ್ಟಡ, ಚರಂಡಿ, ತುರ್ತು ಕುಡಿಯುವ ನೀರು, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ ಸೇರಿದಂತೆ ವಿವಿಧ ಜನೋಪಯೋಗಿ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದಾಗಿದೆ.

ಹೀಗೆ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಆಗುತ್ತದೆ. ಆದರೆ, ಶಾಸಕರು ಈ ಅನುದಾನವನ್ನು ಬಳಸಲು ಹಿಂದೆ ಬಿದ್ದಿದ್ದಾರೆ. ಸಿಎಂ ಸೆಪ್ಟೆಂಬರ್‍ನಲ್ಲಿ ಶಾಸಕರ ನಿ ಬಳಕೆಯಾಗದೇ ಇರುವ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ, ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದರು.

ಪ್ರತಿ ವರ್ಷ ಜೂನ್ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ತಲಾ 2 ಕೋಟಿವರೆಗಿನ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೆ ಎರಡರಲ್ಲೂ ಶಾಸಕರು ಹಿಂದೆ ಬಿದ್ದಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಮಂಜೂರಾದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಹಿಂದುಳಿದಿದ್ದಾರೆ.

2021-22 ಸಾಲಿನಲ್ಲಿ ಎರಡು ಕಂತುಗಳಲ್ಲಿ ತಲಾ 1 ಕೋಟಿ ರೂ.ನಂತೆ ಎರಡು ಕೋಟಿ ರೂ. ಅನುದಾನವನ್ನು ಎಲ್ಲ ಶಾಸಕರ ಖಾತೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಅನುದಾನದ ಬಳಕೆ ಮಾಡುವಲ್ಲಿ ಶಾಸಕರು ತಮ್ಮ ನಿರಾಸಕ್ತಿ ಮುಂದುವರಿಸಿದ್ದಾರೆ.
ಯೋಜನೆ ಇಲಾಖೆ ನೀಡಿದ ಅಂಕಿಅಂಶದಂತೆ ಸೆಪ್ಟೆಂಬರ್ ಅಂತ್ಯದವರೆಗೆ ಶಾಸಕರ ನಿಯಿಂದ ಒಟ್ಟು ಶೇ.27.02ರಷ್ಟಯ ಅನುದಾನ ಮಾತ್ರ ಬಳಕೆಯಾಗಿದೆ.

2021-22 ಸಾಲಿನಲ್ಲಿ ಒಟ್ಟು 300 ಕೋಟಿ ರೂ. ಶಾಸಕರ ನಿ ಅನುದಾನ ಬಿಡುಗಡೆ ಮಾಡಲಾಗಿದೆ. ಆರ್ಥಿಕ ವರ್ಷದ ಆರಂಭ 1.4.2021ರಲ್ಲಿ ಶಾಸಕರ ನಿಧಿಯಲ್ಲಿ 829.98 ಕೋಟಿ ರೂ. ಆರಂಭಿಕ ಶಿಲ್ಕು ಇತ್ತು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 1138.49 ಕೋಟಿ ಹಣ ಇದೆ. ಈ ಪೈಕಿ ಖರ್ಚು ಮಾಡಿರುವುದು ಒಟ್ಟು 307.67 ಕೋಟಿ ರೂ. ಜಿಲ್ಲಾಕಾರಿಗಳ ಪಿಡಿ ಖಾತೆಯಲ್ಲಿ 830.82 ಕೋಟಿ ರೂ. ಅನುದಾನ ಖರ್ಚಾಗದೇ ಬಾಕಿ ಉಳಿದುಕೊಂಡಿದೆ. ಅಂದರೆ ಕೇವಲ 27.02% ಮಾತ್ರ ಅನುದಾನವನ್ನು ಶಾಸಕರು ಬಳಕೆ ಮಾಡಿದ್ದಾರೆ.

# ಜಿಲ್ಲಾವಾರು ಶಾಸಕರ ನಿ ಬಳಕೆ ಪ್ರಮಾಣ:
ಮಂಡ್ಯ ಶೇ.10.71ರಷ್ಟು, ಕೊಪ್ಪಳ ಶೇ.10.88, ಕೋಲಾರ 12.39%, ಯಾದಗಿರಿ 13.87%, ಕಲಬುರ್ಗಿ 13.99%, ಚಿತ್ರದುರ್ಗ 15.87%, ಹಾವೇರಿ 16.81%, ರಾಮನಗರ 16.84%, ಬಳ್ಳಾರಿ 19.63%, ಚಾಮರಾಜನಗರ 20.83%, ಬೆಳಗಾವಿ 22.44%, ರಾಯಚೂರು 24.38%, ಗದಗ 24.98%, ಕೊಡಗು ಶೇ.26.14ರಷ್ಟು ಮಾತ್ರ ಶಾಸಕರ ನಿಧಿ ಅನುದಾನ ಖರ್ಚು ಮಾಡಲಾಗಿದೆ.

ಇನ್ನು ಶಿವಮೊಗ್ಗ 26.42%, ಧಾರವಾಡ 27.14%, ಉ.ಕನ್ನಡ 28.16%, ಚಿಕ್ಕಮಗಳೂರು 29.80%, ಚಿಕ್ಕಬಳ್ಳಾಪುರ 29.81%, ಬೀದರ್ 35.54%, ತುಮಕೂರು 36.17%, ಬೆಂಗಳೂರು ನಗರ 37.16%, ಉಡುಪಿ 38.53%, ಬೆಂಗಳೂರು ಗ್ರಾಮಾಂತರ 40.05%, ಮೈಸೂರು 40.11%, ವಿಜಯಪುರ 43.56%, ಬಾಗಲಕೋಟೆ 44.43%, ದ.ಕನ್ನಡ 44.69%, ಹಾಸನ 45.11%, ದಾವಣಗೆರೆ 45.43% ಪ್ರಮಾಣದಲ್ಲಿ ಶಾಸಕರ ನಿ ಬಳಕೆ ಮಾಡಲಾಗಿದೆ.

Facebook Comments