ಮಹಾರಾಷ್ಟ್ರದಲ್ಲೂ ಕೆಎಂಎಫ್‍ ಮಾದರಿಗೆ ಫಡ್ನವಿಸ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಕೆಎಂಎಫ್‍ಗೆ ಸಲಹೆ ಮಾಡಿದರು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆರಂಭಗೊಂಡ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ನಾಗ್ಪುರ್ದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಎಂಎಫ್ ಸಂಸ್ಥೆಯು ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಲಾಗುತ್ತಿದೆ. ನಮ್ಮಲ್ಲಿಯೂ ಸಹ ಇದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು ಕೆಲಸ ಮಾಡಿದ್ದಾದರೇ ರೈತ ಸಮೂಹಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.

ವಿದರ್ಭ ಭಾಗದಿಂದ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟವನ್ನು ಆರಂಭಿಸಿರುವುದು ಖುಷಿಯಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಿರುವುದನ್ನು ನಾನು ಕೇಳಿದ್ದೇನೆ. ಗ್ರಾಹಕರ ನೆಚ್ಚಿನ ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಮನೆ ಮಾತಾಗಿರುವುದನ್ನು ಗಮನಿಸಿದ್ದೇನೆ. ಸಹಕಾರಿ ತತ್ವವನ್ನು ಪರಿಪಾಲನೆ ಮಾಡಿಕೊಂಡು ಬರುತ್ತಿರುವ ಕೆಎಂಎಫ್ ನಂದಿನಿ ಉತ್ಪನ್ನಗಳು ಮಹಾರಾಷ್ಟ್ರದ ಪ್ರತಿ ಮನೆ ಮನೆಗೆ ತಲುಪಲಿ ಎಂದು ಫಡ್ನಾವಿಸ್ ಆಶಿಸಿದರು.

ಸಹಕಾರಿ ಕ್ಷೇತ್ರವು ವ್ಯವಹಾರಿಕವಾಗಿ ಅಭಿವೃದ್ದಿ ಹೊಂದಲು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೇಂದ್ರದಲ್ಲಿ ಸಹಕಾರಿ ಸಚಿವಾಲಯವನ್ನು ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆಎಂಎಫ್ ನಂತಹ ಸಂಸ್ಥೆಗಳು ಕರ್ತವ್ಯ ನಿರ್ವಹಿಸಿ ಸಹಕಾರಿ ರಂಗದ ಬೆಳವಣಿಗೆಗೆ ಶ್ರಮಿಸಲಿ ಎಂದರು.

ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಕೆಎಂಎಫ್ ರಾಷ್ಟ್ರದ ಎರಡನೇ ಅತೀ ದೊಡ್ಡ ಸಹಕಾರಿ ಹಾಲು ಮಹಾಮಂಡಳಿಯಾಗಿದ್ದು, ಪ್ರತಿನಿತ್ಯ ರಾಜ್ಯದ ಹೈನುಗಾರ ರೈತರಿಂದ 90 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಿ ನಿತ್ಯ ಅಂದಾಜು 24 ಕೋಟಿ ಹಣ ರೈತರಿಗೆ ಪಾವತಿಸಲಾಗುತ್ತಿದೆ. ರಾಜ್ಯದ ರೈತರಿಂದ ಶೇಖರಿಸುವ ಹಾಲನ್ನು ಸಂಸ್ಕರಿಸಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಕ್ರಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲಕ್ಕೆ ಒದಗಿಸುತ್ತಿದೆ ಎಂದು ಅವರು ಹೇಳಿದರು.

ನಾಗಪುರ ಮಹಾನಗರ ಪಾಲಿಕೆಯ ಮೇಯರ್ ದಯಾಶಂಕರ ತಿವಾರಿ, ವಿಜಯಪುರ ಹಾಲು ಒಕ್ಕೂಟದ ಅಧ್ಯಕ್ಷ ಸಾಂಭಾಜಿ ಮಿಸಳೆ, ಕೆಎಂಎಫ್ ನಿರ್ದೇಶಕರಾದ ಕಾ.ಪು.ದಿವಾಕರಶೆಟ್ಟಿ, ಶ್ರೀಶೈಲಗೌಡ ಪಾಟೀಲ, ಸಿ. ವೀರಭದ್ರಬಾಬು, ಪ್ರಕಾಶ, ಆನಂದಕುಮಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments