ದೇವರ ದರ್ಶನಕ್ಕೂ ಟೋಕನ್ ವ್ಯವಸ್ಥೆ ಜಾರಿಗೆರಾಜ್ಯ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.19- ಕೊರೊನಾ ಸಾಂಕ್ರಾಮಿಕದ ನಡುವೆ ದೇವಾಲಯಗಳಲ್ಲಿ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ದೇವಾಲಯಗಳಲ್ಲಿ ಕೋವಿಡ್-19 ಶಿಷ್ಟಾಚಾರ ವನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಂತಹ ವ್ಯವಸ್ಥೆಯನ್ನು ಪರಿಗಣಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಲಾಕ್‍ಡೌನ್ ಸಡಿಲಿಕೆ ಜಾರಿಯಾದಾಗಿನಿಂದಲೂ ದೇವಾಲಯಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಪ್ರಸಿದ್ಧ ದೇವಾಲಯಗಳಲ್ಲಿ ದಟ್ಟಣೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇದನ್ನು ನಿಯಂತ್ರಿಸಲು ನಿರ್ದಿಷ್ಟ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡುವುದು ಉತ್ತಮ ಎನ್ನಲಾಗಿದೆ. ಈ ಸಂಬಂಧ ರೂಪುರೇಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ರುವ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸುವಂತೆಯೂ ನಿರ್ದೇಶಿಸಿದೆ.

ರಾಜ್ಯದಲ್ಲಿನ ಎ, ಬಿ ಮತ್ತು ಸಿ ವರ್ಗೀಕರಣದ ದೇವಾಲಯಗಳ ಬಗ್ಗೆ ವರದಿ ಕೇಳಿದ್ದು, ಆಸ್ತಿ ಬಗ್ಗೆ ಸಮೀಕ್ಷೆ ನಡೆಸಿ, ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದೆ. ಅಲ್ಲದೆ ಭಕ್ತರಿಗೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಯಾತ್ರಿ ನಿವಾಸ ವಸತಿ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ನಿರ್ಮಿಸಲು ಅವಕಾಶವಿರುವ ಸ್ಥಳಗಳ ಪಟ್ಟಿ ತಯಾರಿಸುವಂತೆಯೂ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಹೊರಗಿನ ಜನಪ್ರಿಯ ತಾಣಗಳಾದ ಮಹಾರಾಷ್ಟ್ರದ ಪಂಡರಾಪುರ ಮತ್ತು ತುಳಜಾಪುರ, ಆಂಧ್ರಪ್ರದೇಶದ ಶ್ರೀಶೈಲ ಮತ್ತು ಕೇರಳ ಮತ್ತು ತಮಿಳುನಾಡಿನ ಇತರ ಜನಪ್ರಿಯ ತಾಣಗಳಲ್ಲಿ ಯಾತ್ರಿ ನಿವಾಸ ಸೌಲಭ್ಯ ಕಲ್ಪಿಸಲು ಸ್ಥಳ ಲಭ್ಯತೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.

Facebook Comments