ಬಿಗ್ ನ್ಯೂಸ್ : ಡಿಜೆಹಳ್ಳಿಯಲ್ಲಿ ಬೆಂಕಿಯಿಟ್ಟ ಪುಂಡರ ಆಸ್ತಿ ಮುಟ್ಟುಗೋಲಿಗೆ ಸಿಎಂ ಆದೇಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.17- ರಾಜಧಾನಿ ಬೆಂಗಳೂರನ್ನೇ ದಂಗುಬಡಿಸಿದ್ದ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆಯಲ್ಲಿ ಭಾಗಿಯಾಗಿ ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಹಾಳು ಮಾಡಿದ್ದ ಆರೋಪಿಗಳಿಂದಲೇ ನಷ್ಟ ವಸೂಲಿ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ದೂರು ದಾಖಲಿಸುವ ಮತ್ತೊಂದು ಪ್ರಮುಖ ತೀರ್ಮಾನಕ್ಕೂ ಬರಲಾಗಿದೆ.

ಈಗಾಗಲೇ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಸರ್ಕಾರ, ಸಾರ್ವಜನಿಕರ ಆಸ್ತಿಗಳನ್ನು ಹಾನಿ ಮಾಡಿದ್ದ ಗೂಂಡಾಗಳಿಂದಲೇ ವಸೂಲಿ ಮಾಡುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಇದೀಗ ಕರ್ನಾಟಕ ಸರ್ಕಾರವೂ ಇದೇ ಮಾದರಿಯನ್ನು ಅನುಸರಿಸಿದೆ.

ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ಕಳೆದ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಅಕೃತ ನಿವಾಸ ಕಾವೇರಿಯಲ್ಲಿ ಇಂದು ನಡೆದ ಹಿರಿಯ ಉನ್ನತ ಪೊಲೀಸ್ ಅಕಾರಿಗಳ ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಗುಪ್ತಚರ ವಿಭಾಗದ ಮುಖ್ಯಸ್ಥ ಬಿ.ದಯಾನಂದ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‍ಕುಮಾರ್ ಪಾಂಡೆ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಗಲಭೆಕೋರರಿಂದಲೇ ಆಸ್ತಿ ವಸೂಲಿ ಮಾಡುವ ಸಂಬಂಧ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರಿಂದ ಕಾನೂನು ಸಲಹೆ ಪಡೆದರು.

ಗಲಭೆ ನಡೆದ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಯಾರು ಹಾಳು ಮಾಡಿರುತ್ತಾರೆ ಅವರಿಂದಲೇ ವಸೂಲಿ ಮಾಡುವಂತೆ ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಇದನ್ನೇ ಅನುಸರಿಸಬೇಕೆಂದು ಸಲಹೆ ಮಾಡಿದರು.

ಅಡ್ವೊಕೇಟ್ ಜನರಲ್ ಅವರ ಸಲಹೆಯಂತೆ ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದಲೇ ನಷ್ಟವನ್ನು ವಸೂಲಿ ಮಾಡಬೇಕು. ಒಂದು ವೇಳೆ ನಷ್ಟ ಭರಿಸಲು ಸಾಧ್ಯವಾಗದಿದ್ದರೆ ಅವರ ಆಸ್ತಿಯನ್ನೇ ಜಪ್ತಿ ಮಾಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಳೆದ ಮಂಗಳವಾರ ಸಂಭವಿಸಿದ ಗಲಭೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಿಗೆ ಹಾನಿ ಉಂಟು ಮಾಡಿರುವ ಗಲಭೆಕೋರರಿಂದಲೇ ನಷ್ಟವನ್ನು ಭರಿಸಲು ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಹೈಕೋರ್ಟ್‍ಗೆ ಮನವಿಯನ್ನು ಸಲ್ಲಿಸಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದಂತೆ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವುದಾಗಿ ತಿಳಿಸಿದರು.

ತ್ವರಿತವಾಗಿ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗುವುದು. ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ವಿಚಾರಣೆಗೆ ಅನುಕೂಲವಾಗಲು ಮೂವರು ಸದ್ಯರನ್ನೊಳಗೊಂಡ ವಿಶೇಷ ಅಭಿಯೋಜಕರ ತಂಡವನ್ನು ರಚಿಸಲಾಗುವುದು ಎಂದು ಹೇಳಿದರು.

ಆರೋಪಿಗಳು ಈ ಹಿಂದೆ ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ, ಅವರ ಹಿನ್ನೆಲೆ, ಕುಮ್ಮಕ್ಕು ನೀಡಿದವರು, ಯಾವ ಯಾವ ಸಂಘಟನೆಗಳಿವೆ, ಆರ್ಥಿಕ ನೆರವು ನೀಡಿದವರು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು.

ಪ್ರಸ್ತುತ 300 ಆರೋಪಿಗಳನ್ನು ಬಂಸಲಾಗಿದ್ದು, ಕೆಲವು ಮಹತ್ವದ ಮಾಹಿತಿಗಳು ನಮಗೆ ಲಭ್ಯವಾಗಿದೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಬಂತರ ಮೇಲೆ ಗೂಂಡಾ ಕಾಯ್ದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದರು.

Facebook Comments

Sri Raghav

Admin