ಬ್ರೇಕಿಂಗ್ : ಪೊಲೀಸರ ಖೆಡ್ಡಾಕ್ಕೆ ಬಿದ್ದ ಗಲಭೆ ಕಿಂಗ್ ಪಿನ್‍ಗಳು ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.19- ಡಿಜೆಹಳ್ಳಿ ಹಾಗೂ ಕೆಜಿಹಳ್ಳಿಯಲ್ಲಿ ಕಳೆದ ವಾರ ನಡೆದ ಗಲಭೆ ಸಂಬಂಧ ದುಷ್ಕರ್ಮಿಗಳ ಬೇಟೆ ಮುಂದುವರೆಸಿರುವ ಪೊಲೀಸರು ಇಂದು ಮತ್ತೆ ನಾಲ್ವರು ಮಾಸ್ಟರ್ ಮೈಂಡರ್‍ಗಳನ್ನು ಬಂಧಿಸಿದ್ದಾರೆ.

ನಿನ್ನೆಯಷ್ಟೇ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದ ಜೆಡಿಎಸ್ ಮುಖಂಡ ಹಾಗೂ ಪ್ರಕರಣದ ಪ್ರಮುಖ ರೂವಾರಿ ವಾಜಿದ್‍ನ ಬಲಗೈ ಬಂಟರು ಹಾಗೂ ಈ ಪ್ರಕರಣದ ಪ್ರಮುಖ ರೂವಾರಿಗಳು ಎನ್ನಲಾದ ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಎಂಬುವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ವಾಜಿದ್ ನೀಡಿದ ಸುಳಿವಿನ ಮೇರೆಗೆ ನಗರದ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ಈ ನಾಲ್ವರನ್ನು ಮುಂಜಾನೆ ಸಿಸಿಬಿಯ ಹಿರಿಯ ಪೊಲೀಸ್ ಅಕಾರಿಗಳ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದು ಗೃಹ ಇಲಾಖೆ ಮೂಲಗಳು ಖಚಿತ ಪಡಿಸಿವೆ.

ನಿನ್ನೆ ಬೆಳಗ್ಗೆ ಹಾಗೂ ರಾತ್ರಿಯಿಂದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಾಜಿದ್‍ನನ್ನು ಸಿಸಿಬಿ ಒಂದು ತಂಡ ಗಲಭೆ ಸಂಬಂಧ ತೀವ್ರ ವಿಚಾರಣೆಗೆ ಒಳಪಡಿಸಿತ್ತು.

ಆತ 10 ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿದ್ದು, ಸದ್ಯ ಬೆಂಗಳೂರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ 6 ಮಂದಿ ಆರೋಪಿಗಳು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಸಬಹುದೆಂಬ ಭೀತಿಯಿಂದಾಗಿ ನಗರದಿಂದಲೇ ಪರಾರಿಯಾಗಿದ್ದಾರೆ.

ತಲೆ ಮರೆಸಿಕೊಂಡಿರುವ ಈ ಆರೋಪಿಗಳ ಪತ್ತೆಗಾಗಿ ಸಿಸಿಬಿಯ ಮೂರು ತಂಡ ಬೇರೆ ಬೇರೆ ಭಾಗಗಳಿಗೆ ಈಗಾಗಲೇ ತೆರಳಿದೆ ಎಂದು ಗೃಹ ಇಲಾಖೆಯ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

# ಗಲಭೆಗೆ ಪ್ರಚೋದನೆ:
ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ತೌಸಿಫ್, ಫಾಜಿಲ್, ಅಫ್ಜಲ್, ಪಾಷಾ ಎಂಬುವವರು ವಾಜೀದ್‍ನ ಸೂಚನೆ ಮೇರೆಗೆ ನಗರದ ಬೇರೆ ಬೇರೆ ಭಾಗಗಳಿಂದ ಗಲಭೆ ಎಬ್ಬಿಸಲು ಜನರನ್ನು ಕರೆತರುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು.

ಒಂದೇ ಸಮುದಾಯದ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಜೀದ್‍ನ 10 ಮಂದಿ ಆಪ್ತರು, ಕಳೆದ ಹಲವು ದಿನಗಳಿಂದ ಗಲಭೆ ಎಬ್ಬಿಸುವ ಉದ್ದೇಶದಿಂದಲೇ ನೂರಾರು ಜನರನ್ನು ಸಂಪರ್ಕ ಮಾಡಿದ್ದರು.

ಇದಕ್ಕಾಗಿ ಅವರಿಗೆ ಆರ್ಥಿಕ ನೆರವು, ಮೊಬೈಲ್, ವಾಹನಗಳ ವ್ಯವಸ್ಥೆ, ಜಾಮೀನು ಕೊಡಿಸುವುದು, ಬಂಧನಕ್ಕೊಳಗಾದರೆ ಕುಟುಂಬದವರಿಗೆ ಹಣಕಾಸಿನ ಸಹಾಯ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಈ 10 ಮಂದಿ ಹೇಳಿದ್ದರು.

ಸದ್ಯದಲ್ಲೇ ನಗರದಲ್ಲಿ ದೊಡ್ಡ ಗಲಭೆ ನಡೆಯಲಿದೆ. ನಾವು ನೀಡಿದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಬರಲೇಬೇಕು. ಉಳಿದ ಎಲ್ಲ ವ್ಯವಸ್ಥೆಯನ್ನು ಬೇರೆ ಬೇರೆ ಮುಖಂಡರು ಮಾಡುತ್ತಾರೆ ಎಂದು ತಿಳಿಸಿದ್ದರು.

ಕಳೆದ ಮಂಗಳವಾರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿ ಮಗ ನವೀನ್ ಧಾರ್ಮಿಕ ಮುಖಂಡರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹವಾಗಿ ಪೊಸ್ಟ್ ಮಾಡಿದ್ದು ಗಲಭೆ ಎಬ್ಬಿಸಲು ಒಂದು ಕುಂಟು ನೆಪವಾಗಿತ್ತು.

ಪೂರ್ವ ನಿಯೋಜನೆಯಂತೆ ಇದನ್ನೇ ಕಾರಣವಾಗಿಟ್ಟುಕೊಂಡು ವಾಜಿದ್ ಹಾಗೂ ಆತನ ಸಹಚರರು ಜನರನ್ನು ಒಗ್ಗೂಡಿಸಿ ಗಲಭೆ ಎಬ್ಬಿಸಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

# ಹಣದ ಮೂಲ ಶೋಧ:
ಇನ್ನು ಪೊಲೀಸರ ವಶದಲ್ಲಿರುವ ಶಂಕಿತ ಸಮಿವುದ್ದೀನ್‍ಗೆ ವಿದೇಶದಿಂದ ಭಾರೀ ಪ್ರಮಾಣದ ಆರ್ಥಿಕ ನೆರವು ಹರಿದು ಬಂದಿರುವುದನ್ನು ಕೇಂದ್ರ ಸರ್ಕಾರ ಪತ್ತೆಹಚ್ಚಿದೆ.

ನಗರದ ಎಚ್‍ಬಿಆರ್‍ಲೇಔಟ್‍ನಲ್ಲಿ ಸಮೀವುದ್ದೀನ್ ತನ್ನ ಪತ್ನಿ ಸಮ್ರೋಮ್ ಹೆಸರಿನಲ್ಲಿ ನೂರಿ ಎಂಬ ಎನ್‍ಜಿಒ ಸಂಸ್ಥೆ ಮೂಲಕ ಸಮಾಜ ಸೇವೆ ನಡೆಸುತ್ತಿದ್ದಾನೆ.

ಈತನಿಗೆ ಕಳೆದ ಹಲವು ವರ್ಷಗಳಿಂದ ದುಬೈ, ಕುವೈತ್ ಸೇರಿದಂತೆ ಕೆಲವು ಅರಬ್ ರಾಷ್ಟ್ರಗಳಿಂದ ಕೋಟ್ಯಂತರ ರೂ. ಟ್ರಸ್ಟ್‍ಗೆ ಹರಿದು ಬಂದಿದೆ ಎಂಬ ಸಂಶಯ ವ್ಯಕ್ತವಾಗಿದೆ.

ಇದರ ಮೂಲವನ್ನು ಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿದ್ದು, ಈ ಹಣದಿಂದಲೇ ಸಮಿವುದ್ದೀನ್ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಸಿಸಿಬಿ ಪೊಲೀಸರು ಹಣದ ಮೂಲದ ಬೆನ್ನುಹತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin