ಡಿಜೆ ಹಳ್ಳಿ ಗಲಭೆ : ಮತ್ತಿಬ್ಬರು ಬಿಬಿಎಂಪಿ ಸದಸ್ಯರ ಬಂಧನ ಸಾಧ್ಯತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಸಿದಂತೆ ಮತ್ತಿಬ್ಬರು ಬಿಬಿಎಂಪಿ ಸದಸ್ಯರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.

ಬಿಬಿಎಂಪಿ ಸದಸ್ಯರಲ್ಲದೆ ನಗರವನ್ನು ಪ್ರತಿನಿಸುತ್ತಿರುವ ಶಾಸಕರೊಬ್ಬರಿಗೂ ನೋಟಿಸ್ ಜಾರಿ ಮಾಡಲು ಪೊಲೀಸರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.  ಈಗಾಗಲೇ ಘಟನೆಗೆ ಸಂಬಂಸಿದಂತೆ ನಾಗವಾರ ಕಾರ್ಪೊರೇಟರ್ ಇರ್ಷಾದ್ ಬೇಗಂ ಅವರ ಪತಿ ಖಲೀಂ ಅವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇದರ ಬೆನ್ನಲ್ಲೇ ಡಿಜೆ ಹಳ್ಳಿ ಬಿಬಿಎಂಪಿ ಸದಸ್ಯ ಹಾಗೂ ಮಾಜಿ ಮೇಯರ್ ಸಂಪತ್‍ರಾಜ್ ಹಾಗೂ ಪುಲಿಕೇಶಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಅಬ್ದುಲ್ ರಖೀಬ್ ಝಾಕಿರ್ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಮೇಲ್ನೋಟಕ್ಕೆ ಗಲಭೆ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ಕೃತ್ಯಕ್ಕೆ ಕೆಲ ರಾಜಕೀಯ ಮುಖಂಡರು ಹಾಗೂ ಬಿಬಿಎಂಪಿ ಸದಸ್ಯರು ಕುಮ್ಮಕ್ಕು ನೀಡಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು, ಒಂದೆರಡು ದಿನಗಳಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಈಗಾಗಲೇ ಪೊಲೀಸರ ವಶದಲ್ಲಿರುವ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಅವರ ಪತಿ ಖಲೀಂ ಅವರು ಗಲಭೆ ಸಂಭವಿಸುವ ಮುನ್ನ ಪೊಲೀಸ್ ಠಾಣೆಗೆ ಬಂದು ನವೀನ್ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

ಪೊಲೀಸರು ದೂರು ದಾಖಲಿಸಿಕೊಂಡ ನಂತರ ಠಾಣೆಯಿಂದ ಹೊರಹೋಗಿ ಪ್ರತಿಭಟನಾಕಾರರೊಂದಿಗೆ ಕಾಣಿಸಿಕೊಂಡಿದ್ದರು. ಯಾವಾಗ ಗಲಭೆ ತೀವ್ರವಾಯಿತೋ ಆ ಸಂದರ್ಭದಲ್ಲಿ ಖಲೀಂ ಗಲಭೆಯನ್ನು ತಡೆಹಿಡಿಯುವ ನಾಟಕವಾಡಿದ್ದರು.

ಖಲೀಂ ಅವರ ಸಂಪೂರ್ಣ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದ ಪೆÇಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಖಲೀಂ ಹಲವಾರು ಮಹತ್ವದ ವಿಷಯಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಜಿ ಮೇಯರ್ ಸಂಪತ್‍ರಾಜ್ ಅವರು ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಗಲಭೆಗೆ ಕುಮ್ಮಕ್ಕು ನೀಡಿಲ್ಲ ಎಂಬುದು ಸ್ಪಷ್ಟವಾದರೆ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಕೈವಾಡವಿರುವುದು ಸಾಬೀತಾದರೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ.

ಈ ಮಧ್ಯೆ ಘಟನೆ ಹಿಂದೆ ಶಾಸಕರೊಬ್ಬರ ಕೈವಾಡವಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಆ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಉತ್ತರ ನಿರೀಕ್ಷಿಸಲಾಗಿದೆ. ಅವರಿಂದ ಸಮರ್ಪಕ ಉತ್ತರ ಬಂದ ನಂತರವಷ್ಟೇ ಮುಂದಿನ ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ.

Facebook Comments

Sri Raghav

Admin