ಡಿಜಿಪಿ ಎ.ಎಂ.ಪ್ರಸಾದ್ ನಿವೃತ್ತಿ
ಬೆಂಗಳೂರು, ಅ.29- ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕರಾದ ಎ.ಎಂ.ಪ್ರಸಾದ್ ಅವರು ಈ ತಿಂಗಳ ಅಂತ್ಯದಲ್ಲಿ ಸೇವೆಯಿಂದ ನಿವೃತ್ತಿ ಯಾಗಲಿದ್ದಾರೆ. 1985ರಲ್ಲಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿ ಕರ್ನಾಟಕ ಖೇಡರ್ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾದ ಅವರು, ತುಮಕೂರು, ಮಂಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ನಂತರ ಕೇಂದ್ರ ಸೇವೆಗೆ ತೆರಳಿದರು. ಕೇಂದ್ರ ಗುಪ್ತ ದಳದಲ್ಲಿ ಸುಮಾರು 9 ವರ್ಷ ಸೇವೆ ಸಲ್ಲಿಸಿ ಮತ್ತೆ ರಾಜ್ಯ ಸೇವೆಗೆ ಮರಳಿದರು. ಕೆಎಸ್ಆರ್ಪಿ ವಿಭಾಗದ ಐಜಿಪಿಯಾಗಿ ಸೇವೆ ಸಲ್ಲಿಸಿದ ನಂತರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಹುದ್ದೆಗೆ ಬಡ್ತಿ ಪಡೆದ ಅವರು, ನಾಲ್ಕು ವರ್ಷಗಳ ಕಾಲ ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದರು.
ನಂತರ ಡಿಜಿಪಿ ಹುದ್ದೆಗೆ ಬಡ್ತಿ ಪಡೆದ ಅವರು ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾವಣೆಯಾದರು.ಈಗ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಸುಮಾರು 13 ವರ್ಷಗಳ ಕಾಲ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸಿದ ಕೀರ್ತಿ ಎ.ಎಂ.ಪ್ರಸಾದ್ ಅವರಿಗೆ ಸಲ್ಲುತ್ತದೆ.