ತಿಂಗಳಾಂತ್ಯಕ್ಕೆ ಡಿಜಿಪಿ ಟಿ. ಸುನೀಲ್‍ಕುಮಾರ್ ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 29- ಸಿಐಡಿ ಘಟಕದ ಡಿಜಿಪಿ ಟಿ. ಸುನೀಲ್‍ಕುಮಾರ್ ಅವರು ಈ ತಿಂಗಳ ಅಂತ್ಯದಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಸುನೀಲ್‍ಕುಮಾರ್ ಅವರು ಬಿಎಸ್‍ಸಿ ಕೃಷಿ ಪದವಿಯನ್ನು ಪಾಸ್ ಮಾಡಿ ನವದೆಹಲಿಯಲ್ಲಿ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು 1986ರಲ್ಲಿ ಐಎಫ್‍ಎಸ್(ಅರಣ್ಯ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರಣ್ಯ ಅಧಿಕಾರಿಯಾಗಿದ್ದರು.

ತದನಂತರ 1989ರಲ್ಲಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯಕ್ಕೆ ಬಂದರು. ಬೀದರ್ ಜಿಲ್ಲೆಯ ಹುಮ್ನಾಬಾದ್ ಉಪವಿಭಾಗದಲ್ಲಿ ಎಎಸ್‍ಪಿಯಾಗಿ ಸೇವೆ ಆರಂಭಿಸಿದ ಸುನೀಲ್‍ಕುಮಾರ್ ಕೆಜಿಎಫ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಎಸ್‍ಪಿಯಾಗಿದ್ದರು. ನಂತರ ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಡಿಐಜಿ, ತದನಂತರ ಐಜಿಪಿ ಹುದ್ದೆಗೆ ಬಡ್ತಿ ಪಡೆದ ಅವರು ಬೆಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಬಡ್ತಿ ಹೊಂದಿದ ಅವರು, ಆಂತರಿಕ ಭದ್ರತೆ, ಬಿಎಂಟಿಎಫ್, ಸಿಆರ್‍ಇಸೆಲ್, ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ನಲ್ಲಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡರು.

23 ತಿಂಗಳು ಆಯುಕ್ತರಾಗಿ ಸೇವೆ ಸಲ್ಲಿಸಿದ ನಂತರ ಸರ್ಕಾರ ಅವರನ್ನು ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಮಾಡಿತ್ತು. ನಂತರ ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರ ನಿನ್ನೆ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಸಿಐಡಿ ಘಟಕಕ್ಕೆ ವರ್ಗಾವಣೆ ಮಾಡಿತು. ಸಿಐಡಿ ಘಟಕದ ಡಿಜಿಪಿಯಾಗಿ ಅವರು ಇಂದು ಅಧಿಕಾರ ವಹಿಸಿಕೊಂಡರು.

Facebook Comments