ಧರ್ಮಸ್ಥಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Dharmastala--01

ಶಿಲ್ಪಕಲಾ ಜಗತ್ತಿನಲ್ಲಿ ಭರತಖಂಡದ ವಾಸ್ತುಶಿಲ್ಪ ತನ್ನದೇ ಆದ ಸ್ಥಾನಮಾನ ಗೌರವಗಳನ್ನು ಹೊಂದಿರುವಂತೆಯೇ ಕರ್ನಾಟಕದ ವಾಸ್ತುಶಿಲ್ಪವೂ ವಿಶೇಷ ಮಾನ್ಯತೆ ಪಡೆದಿದೆ.

ಕನ್ನಡ ನಾಡನ್ನಾಳಿದ ಕದಂಬರು, ಗಂಗರು, ಹೊಯ್ಸಳರು, ರಾಷ್ಟ್ರಕೂಟರು, ಬಾದಾಮಿಯ ಚಾಲುಕ್ಯರು, ವಿಜಯನಗರ ಅರಸರು, ಮೈಸೂರು ಒಡೆಯರು ಸೇರಿದಂತೆ ನಾಡಿನ ಭವ್ಯತೆ ಹಿರಿಮೆ ಸಾರಲು ಕರಾವಳಿ ಹಲವು ಜೈನ ರಾಜಮನೆತನಗಳ ಕೊಡುಗೆಯೂ ಅಪಾರ. ಅದರಲ್ಲೂ ಜೈನರು ನಿರ್ಮಿಸಿದ ತೀರ್ಥಂಕರ ಬಸದಿಗಳು, ಗೊಮ್ಮಟ ಮೂರ್ತಿಗಳು ಧಾರ್ಮಿಕ ಹಿರಿಮೆಯ ಪ್ರತೀಕವಾಗಿವೆ.

ಕರಾವಳಿ ಹಾಗೂ ಮಲೆನಾಡಿನಲ್ಲಿ ಆಳಿದ ಜೈನ ರಾಜಮನೆತನಗಳಲ್ಲಿ ಬಾರ್ಕೂರಿನ ಆಳುಪರು, ಗೇರುಸೊಪ್ಪೆಯ ಸಾಳುವರು, ಬೆಳ್ತಂಗಡಿಯ ಹೆಗ್ಗಡೆಗಳು, ವೇಣೂರಿನ ಅಜಿಲರು, ಬಂಗ್ವಾಡಿಯ ಬಲ್ಲಾಳರು, ಕಾರ್ಕಳದ ಬೈರರಸರು, ಮುಲ್ಕಿಯ ಸಾವಂತರು, ಹೊಸಂಗಡಿಯ ಭಿನ್ನಾಣಿಯರು, ಮೂಡಬಿದ್ರೆಯ ಚೌಟರು ಇನ್ನಿತರ ಜೈನ ರಾಜ ಮನೆತನಗಳು ಧಾರ್ಮಿಕತೆಗೆ ನೀಡಿದ ಒತ್ತು ಸಮಾಜದ ಕನ್ನಡಿಯಾಗಿವೆ.

ಕರ್ನಾಟಕದಲ್ಲಿರುವ ಹತ್ತಾರು ಗೊಮ್ಮಟಮೂರ್ತಿ ಪೈಕಿ ಶ್ರವಣಬೆಳಗೊಳ, ವೇಣೂರು, ಕಾರ್ಕಳ ಹಾಗೂ ಧರ್ಮಸ್ಥಳ ಮೂರ್ತಿಗಳು ಪ್ರಮುಖವೆನಿಸಿವೆ. ಜೈನ ಧರ್ಮಗಳ ಏಳಿಗೆಗೆ ಶ್ರಮಿಸಿದವರು ನಾಡಿನ ಉದ್ದಕ್ಕೂ 50ಕ್ಕೂ ಹೆಚ್ಚು  ಕಡೆ ಪ್ರತಿಷ್ಠಾಪಿಸಿರುವ ಗೊಮ್ಮಟಮೂರ್ತಿಗಳ ಬಗ್ಗೆ ಸಂಶೋಧನೆ ಅಗತ್ಯವಾಗಿದೆ.

ಇದೀಗ ಧರ್ಮದೇವತೆಗಳ ನೆಲೆವೀಡಾಗಿರುವ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನರಾಗಿರುವ ಶ್ರೀ ಗೊಮ್ಮಟೇಶ್ವರನಿಗೆ 4ನೇ ಮಹಾಮಸ್ತಾಕಭೀಷೇಕ ಸಡಗರ ಸಂಭ್ರಮ.

ಬಾಹುಬಲಿ ವೈರಾಗ್ಯಮೂರ್ತಿ ನಿರಹಂಕಾರಿ ಅಂತಹ ವ್ಯಕ್ತಿಯ ಎದುರು ನಿಂತ ಎಂತಹ ಅಹಂಕಾರಿಯು ಮೌನಿಯಾಗುತ್ತಾನೆ. ತಾನು ಆ ಮಹಾತ್ಮನಿಂದ ಕಲಿಯುವುದು ತಿಳಿಯುವುದು ಬಹಳಷ್ಟಿದೆ ಎಂದು ಆಲೋಚಿಸುತ್ತಾನೆ ಎಂಬ ದೃಷ್ಠಿಯಿಂದ ಬಾಹುಬಲಿಯ ಪ್ರತಿಷ್ಠಾಪನೆಯಾಗಿದೆ.

ಶಾಂತಮೂರ್ತಿಯ ಭವ್ಯತೆಯ ಮುಂದೆ ಮನುಷ್ಯ ಗೌಣ ಎಂಬ ಸಂದೇಶ ಸಾರುವ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಸಮಾಜಕ್ಕೆ ಒಳಿತು ಎಂದು ನಂಬಿದ್ದ ರತ್ನವರ್ಮ ಹೆಗ್ಗಡೆ ಅವರ ಕನಸನ್ನು ಮಗ ವೀರೇಂದ್ರಹೆಗ್ಗಡೆ ನನಸು ಮಾಡಿದರು.

ಬಾಹುಬಲಿ ಜೀವನ:- ಪ್ರಥಮ ತೀರ್ಥಂಕರ ವೃಷಭದೇವ -ಸುನಂದೆ ಮಗನಾದ ಬಾಹುಬಲಿ ಪೌದನಪುರದ ಯುವರಾಜ, ಸೋದರಭರತನ ನಡುವೆ ಯುದ್ದ ನಡೆದು ದೃಷ್ಠಿ-ಮಲ್ಲ-ಜಲ ಯುದ್ದದಲ್ಲಿ ಬಾಹುಬಲಿಯೇ ಜಯಗಳಿಸಿದ ನಂತರ ಗೆದ್ದ ರಾಜ್ಯದ ಸಮಸ್ತವನ್ನು ಅಣ್ಣ ಭರತನಿಗೆ ಒಪ್ಪಿಸಿ ದೀಕ್ಷೆ ಪಡೆದು ತಪಸ್ಸನ್ನಾಚರಿಸಿ ಕೇವಲ್ಯ ಜ್ಞಾನದ ಮೂಲಕ ಮೋಕ್ಷಗಾಮಿಯಾಗಿ ಶಾಂತಿ, ಅಹಿಂಸೆ, ತ್ಯಾಗ ಸಂದೇಶಗಳನ್ನು ವಿಶ್ವಕ್ಕೆ ಸಾರಿ ಲೋಕ ಮಾನ್ಯರಾದರು.

ಇಂತಹ ಬಾಹುಬಲಿ ಮೂರ್ತಿಗೆ ಈ ಮಜ್ಜನದ ಸಡಗರ ಆರಂಭಗೊಂಡಿದ್ದು, 4ನೇ ಮಹಾಮಸ್ತಕಾಭಿಷೇಕಕ್ಕಾಗಿ ಧರ್ಮಸ್ಥಳವೇ ಸಜ್ಜುಗೊಳ್ಳುತ್ತಿದೆ. ಇದೇ 9 ರಿಂದ 18ರವರೆಗೆ ನಡೆಯಲಿರುವ ಈ ಮಸ್ತಕಾಭಿಷೇಕದ ದಿವ್ಯ ಸಾನಿಧ್ಯವನ್ನು ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರು ವಹಿಸುವರು.

ಮೂರ್ತಿ ನಿರ್ಮಾಣಕ್ಕೆ ಪ್ರೇರಣೆ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನೇತ್ರಾವತಿ ನದಿಯ ಎಡದಂಡೆಯ ಪಾವನಕ್ಷೇತ್ರವೇ ಶ್ರೀ ಕ್ಷೇತ್ರಧರ್ಮಸ್ಥಳ. ಈ ಪುಣ್ಯಕ್ಷೇತ್ರಕ್ಕೆ 800 ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಸುಮಾರು 20 ಜನ ಧರ್ಮಾಧಿಕಾರಿಗಳಾಗಿ ಈ ಕ್ಷೇತ್ರದಲ್ಲಿ ಅಧಿಕಾರ ನಡೆಸಿದ್ದು, ವೀರೇಂದ್ರ ಹೆಗ್ಗಡೆಯವರು 21ನೇಯವರು.

ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ||ಮಂಜಯ್ಯ ಹೆಗ್ಗಡೆಯವರು ನಡಾವಳಿಯನ್ನು ಆರಂಭಿಸಿದರು. ಇದು 7 ದಿನಗಳ ಕಾಲ ನಡೆಯುವ ಉತ್ಸವ.

20ನೇ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ ಮತ್ತು ಅವರ ಪತ್ನಿ ರತ್ನಮ್ಮ ಈ ಕೈಂಕರ್ಯದಲ್ಲಿ ಸದಾ ತೊಡಗಿಸಿಕೊಳ್ಳುತ್ತಿದ್ದರು. ಈ ನಡುವೆ ದಂಪತಿಗಳಿಗೆ ಕಾರ್ಕಳ, ವೇಣೂರು ಬಾಹುಬಲಿಗಳ ಮಹಾಮಸ್ತಕಾಭಿಷೇಕಗಳ ದರ್ಶನದ ಪ್ರೇರಣೆಯಿಂದ ನಲ್ಯಾಡಿಬೀಡಿನಲ್ಲಿ ಈ ಬಾಹುಬಲಿಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಮನಸ್ಸಾಗಿ ನಾಡಿನ ಬಾಹುಬಲಿಮೂರ್ತಿಗಳನ್ನೆಲ್ಲ ಸಂದರ್ಶಿಸಿ ಕಾರ್ಕಳದ ರೆಂಜಾಳ ಗೋಪಾಲಶಣೈರವರಿಂದ ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿ 39 ಅಡಿ ಎತ್ತರದ ಮೂರ್ತಿ ಕಡೆಯಲು ಮುಹೂರ್ತ ನಿಗದಿಪಡಿಸಿದರು.

ಅದರಂತೆ 1967ರ ವಿಜಯ ದಶಮಿಯಂದು ತಂದೆ ತಾಯಿಯ ಆಶಯ ನೆರವೇರಿಸಲು ಶಾಸ್ತ್ರೋಕ್ತವಾಗಿ ವೀರೇಂದ್ರಹೆಗ್ಗಡೆಯವರು ಈ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿ, ನೂರಾರು ಜನ ಶಿಲ್ಪಿಗಳ ಕೈಯಲ್ಲಿ ಅರಳಿ ನಿಂತಿರುವುದೇ ಧರ್ಮಸ್ಥಳದ ಅಜಾನುಬಾಹು ಗೊಮ್ಮಟ ಮೂರ್ತಿ. 6 ಅಡಿ ಉದ್ದದ ಮುಖ, 1 ಅಡಿ ಕುತ್ತಿಗೆ, 22.3 ಅಡಿಗಳ ತೋಳುಗಳು, 19.5 ಅಡಿಗಳ ಸೊಂಟದ ಸುತ್ತಳತೆ, 13 ಅಡಿಗಳ ಬೆನ್ನಿನ ಭಾಗ, 13.5 ಅಡಿಗಳ ಭುಜದ ಅಗಲ, 1.4 ಅಡಿಗಳ ದಪ್ಪ ಪಾದನೆಗಳು, 1 ಅಡಿ ಹೆಬ್ಬೆರಳು, 3.5 ಅಡಿಗಳ ಕಿವಿಗಳು, ಹಾಗೂ 1.10 ಅಡಿಗಳ ಮೂಗು, ವಿಗ್ರಹವು ಪಾದದಿಂದ ನೆತ್ತಿಯವರೆಗೆ 39 ಅಡಿಗಳು ಎತ್ತರ ಪೀಠ 13 ಅಡಿ ಪೀಠ ಸಹಿತ ವಿಗ್ರಹದ ಎತ್ತರ 52 ಅಡಿಗಳು ಎಂದು ಹೇಳಲಾಗುತ್ತದೆ.

ಈ ಬೃಹತ್ ಮೂರ್ತಿ ಕೆತ್ತನೆ ಕೆಲಸ ಪೂರ್ತಿಯಾಗಲು 8 ವರ್ಷಗಳು ಬೇಕಾಯಿತು. ನಂತರ ಸುಮಾರು 170 ಟನ್ ಭಾರದ 14 ಅಡಿ ಅಗಲವಿರುವ ಈ ಬಾಹುಬಲಿಮೂರ್ತಿಯನ್ನು ಧರ್ಮಸ್ಥಳದ ರತ್ನಗಿರಿ ಬೆಟ್ಟಕ್ಕೆ ಸಾಗಿಸಲು ಮುಂಬೈನ ಮಂಗತ್‍ರಾಮ್ ಬ್ರದರ್ಸ್ ಕಂಪನಿಗೆ ಒಪ್ಪಿಸಲಾಯಿತು. ಕಂಪನಿ ಮಾಲೀಕ ದೀನನಾಥ ಜಬಾನ್ 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರಾಲಿ ಮೂಲಕ ಸಾಗಣೆ ಕಾರ್ಯವನ್ನು 1973ರ ಫೆ.15ರಂದು ಪ್ರಾರಂಭಿಸಿ ಮೂಡಬಿದರೆ, ವೇಣೂರು, ಬೆಳ್ತಂಗಡಿ, ಉಜಿರೆ ಮೂಲಕ ಮೂರು ದಿನಗಳ ಕಾಲ ಪ್ರಯಾಣ ಮಾಡಿ ಫೆ.18 ರಂದು ಧರ್ಮಸ್ಥಳಕ್ಕೆ ತಲುಪಿಸಲಾಯಿತು. ನಂತರ ವಿಗ್ರಹವನ್ನು ನಿಲ್ಲಿಸುವಿಕೆ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡು 1982ರಲ್ಲಿ ಬಾಹುಬಲಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿ ಪ್ರಥಮ ಮಹಾಮಸ್ತಕಾಭಿಷೇಕ ನಡೆಸಲಾಯಿತು.

ಮಹಾಮಸ್ತಕಾಭಿಷೇಕಗಳ ವಿವರ:
ಮೊದಲ ಮಹಾಮಸ್ತಕಾಭಿಷೇಕ 1982ನೇ ಜ.25ರಿಂದ ಫೆ.4ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಶ್ರೀ ಎಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ಮತ್ತು ಮುನಿಶ್ರೀ ವಿಮಲಾಸಾಗರ್ ಜಿ ನೇತೃತ್ವದಲ್ಲಿ ನಡೆಯಿತು.ಅಖಿಲ ಭಾರತ ದಿಗಂಬರ ಜೈನ ಮಹಾಸಭಾ ವತಿಯಿಂದ ಶಿಲ್ಪಿ ರೆಂಜಾಳ ಗೋಪಾಲಶಣೈಗೆ ಚಿನ್ನದ ಕಡಗ ತೊಡಿಸಿ ಕನಕಾಭಿಷೇಕ ಹಾಗೂ ವೀರೇಂದ್ರಹೆಗ್ಗಡೆಯವರಿಗೆ ಧರ್ಮಯೋಗಿ ಬಿರುದು ನೀಡಿ ಗೌರವಿಸಲಾಯಿತು.

ದ್ವಿತೀಯ ಮಹಾಮಸ್ತಕಾಭಿಷೇಕ 1995 ಫೆ.5ರಿಂದ 10ರವರೆಗೆ ನೆರವೇರಿಸಲಾಯಿತು.ತೃತೀಯ ಮಹಾಮಸ್ತಕಾಭಿಷೇಕ 2007ರ ಜ.28 ರಿಂದ ಫೆ.2ರವರೆಗೆ ವೀರೇಂದ್ರಹೆಗ್ಗಡೆ ನೇತೃತ್ವದಲ್ಲಿ ಆಚಾರ್ಯ ಶ್ರೀವರ್ಧಮಾನಸಾಗರ ಮಹಾರಾಜರು, ಕಾರ್ಕಳ ದಿಗಂಬರ ಜೈನ ಮಠಾಧ್ಯಕ್ಷರಾದ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯರ ಸಾನಿಧ್ಯದಲ್ಲಿ ಅಟ್ಟಳಿಕೆ ಮೂರ್ತಿ ಕಾರ್ಯ ನೆರವೇರಿತು.

ಮೂಡುಬಿದರೆ ಜೈನ ಮಠಾಧ್ಯಕ್ಷರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಇದೀಗ ಚತುರ್ಥ ಮಹಾಮಸ್ತಕಾಭಿಷೇಕ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದ್ದು, ಆಚಾರ್ಯ ಪುಷ್ಪದಂತ ಸಾಗರ ಮುನಿ ಮಹಾರಾಜರ ಹಾಗೂ ಸಮಸ್ತ ಆಚಾರ್ಯರು, ಮುನಿಗಳು, ಮತ್ತು ಆರ್ಯಿಕ ಮಾತಾಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ