ಆಹಾರ ಧಾನ್ಯದಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ,ಸೆ.10- ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ ಪಡಿತರ ಧಾನ್ಯದಲ್ಲಿ ಕಲ್ಲು ಮತ್ತು ಮಣ್ಣು ಮಿಶ್ರಣ ಮಾಡಿದ್ದ ಅಧಿಕಾರಿಯನ್ನು ಸರ್ಕಾರಿ ಪಡಿತರ ವಿತರಕರ ಸಂಘ ಪತ್ತೆ ಹಚ್ಚಿದೆ.
ಧಾರವಾಡದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹಾಗೂ ಗೋದಾಮು ವ್ಯವಸ್ಥಾಪಕ ಸಂಗಪ್ಪ ಎಂಬುವರು ಪಡಿತರ ಧಾನ್ಯದಲ್ಲಿ ಕಲ್ಲು ಮತ್ತು ಮಣ್ಣು ಮಿಶ್ರಣ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದರು.

ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಪದಾಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ.ಇದೇ ಕೆಲಸವನ್ನು ಅಂಗಡಿ ಮಾಲೀಕರು ಮಾಡಿದ್ದಲ್ಲಿ ತಕ್ಷಣ ಅಧಿಕಾರಿಗಳು ಅಂಗಡಿಗಳನ್ನು ರದ್ದು ಮಾಡುತ್ತಾರೆ.

ಆದರೆ ಇಂತಹ ಕುಕೃತ್ಯ ನಡೆಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.ಗೋದಾಮಿನಲ್ಲಿ 25ರಿಂದ 30 ಪಡಿತರ ಧಾನ್ಯಗಳಿದ್ದವು.ದುರುದ್ದೇಶಪೂರಕವಾಗಿ ಅಧಿಕಾರಿಗಳು ಕಲ್ಲು, ಮಣ್ಣು ಮಿಶ್ರಣ ಮಾಡಿ ಗ್ರಾಹಕರಿಗೆ ಹಲವು ತಿಂಗಳುಗಳಿಂದ ಮೋಸ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ದೂರು ನೀಡುವುದಾಗಿ ಕೃಷ್ಣಪ್ಪ ಹೇಳಿದ್ದಾರೆ.

ಸದಾಶಿವ ಮರ್ಜಿ ಮತ್ತು ಸಂಗಪ್ಪ ಗ್ರಾಹಕರಿಗೆ ಬೆದರಿಕೆಯನ್ನು ಹಾಕುತ್ತಿದ್ದರು. ಆಹಾರ ಧಾನ್ಯಗಳಲ್ಲಿ ಕಲ್ಲು ಮತ್ತು ಮಣ್ಣು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಯಾರಾದರೂ ಪ್ರಶ್ನೆ ಮಾಡಿದರೆ, ಕೊಟ್ಟಿದ್ದನ್ನು ತೆಗೆದುಕೊಂಡು ಹೋಗಿ ಇಲ್ಲದಿದ್ದರೆ ಮುಂದಿನ ತಿಂಗಳು ಪಡಿತರವನ್ನೇ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಪದಾಧಿಕಾರಿಗಳು ದಾಳಿ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ.ಕಳೆದ ಹಲವು ವರ್ಷಗಳಿಂದ ಈ ಇಬ್ಬರು ಅಧಿಕಾರಿಗಳು ಆಹಾರ, ಧಾನ್ಯಗಳನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸುವುದು ಹಾಗೂ ಫಲಾನುಭವಿಗಳಿಗೆ ಗುಣಮಟ್ಟದ ಪಡಿತರ ವಿತರಣೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಟಿ.ಕೃಷ್ಣಪ್ಪ ಮನವಿ ಮಾಡಿದ್ದಾರೆ.

Facebook Comments

Sri Raghav

Admin