ಬ್ರೇಕಿಂಗ್ : ಕ್ರಿಕೆಟ್ಗೆ ಬ್ರೇಕ್ ಕೊಟ್ಟು ಸೇನೆಯಲ್ಲಿ ಸೇವೆಗೆ ಮುಂದಾದ ಧೋನಿ..!
ನವದೆಹಲಿ, ಜು.20- ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ನಲ್ಲಿ ಭಾರತ ತಂಡ ಪರಾಭವಗೊಂಡ ನಂತರ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಎದ್ದಿರುವಾಗಲೇ ಟೀಂ ಇಂಡಿಯಾ ವಿಕೆಟ್ ಕೀಪರ್ ಮಹತ್ವದ ನಿರ್ಧಾರವನೊಂದನ್ನು ಕೈಗೊಂಡು ಅಚ್ಚರಿ ಮೂಡಿಸಿದೆ.
ವೆಸ್ಟ್ ಇಂಡೀಸ್ ಪ್ರವಾಸದಿಂದ ಸ್ವಯಂ ಅಲಭ್ಯತೆ ಘೋಷಿಸಿರುವ ಧೋನಿ ಭಾರತೀಯ ಗಡಿ ಪ್ರಾಂತ್ಯದ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಎರಡು ತಿಂಗಳ ಕಾಲ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರ ಧೋನಿ ಅವರಿಗೆ ಈ ಹಿಂದೆ ಪ್ಯಾರಾಚೂಟ್ ರೆಜಿಮೆಂಟ್ನ ಗೌರವ ಲೆಫ್ಟಿನೆಂಟ್ ಕರ್ನ್ಲ್ ಹುದ್ದೆಯನ್ನು ನೀಡಿತ್ತು. ವೆಸ್ಟ್ಇಂಡೀಸ್ ಪ್ರವಾಸಕ್ಕೆ ಸ್ವಯಂ ಗೈರು ಆಗುವ ತಮ್ಮ ನಿರ್ಧಾರವನ್ನು ಬಿಸಿಸಿಐಗೆ 38 ವರ್ಷದ ಖ್ಯಾತ ಪಟು ಸ್ಪಷ್ಟವಾಗಿ ತಿಳಿಸಿದ್ದಾರೆ.
ನಾಳೆ ವೆಸ್ಟ್ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ತಂಡದ ಆಯ್ಕೆ ನಡೆಯುವುದಕ್ಕೂ ಮುನ್ನ ಧೋನಿ ತಮ್ಮ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರವಾನಿಸಿದ್ದಾರೆ.
ತಾವು ಎರಡು ತಿಂಗಳ ಕಾಲ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸಿ ಆ ದಳವನ್ನು ಬಲಗೊಳಿಸಲು ಇಚ್ಛಿಸಿರುವುದಾಗಿ ಧೋನಿ ತಮ್ಮ ನಿರ್ಧಾರ ಪತ್ರದಲ್ಲಿ ತಿಳಿಸಿದ್ದಾರೆ.
ವಿಶ್ವಕಪ್ ಕ್ರಿಕೆಟ್ ನಂತರ ಧೋನಿ ತಮ್ಮ ನೆಚ್ಚಿನ ಕ್ರೀಡೆಗೆ ವಿದಾಯ ಹೇಳಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಧೋನಿ ಅವರ ಸೇನೆ ಸೇವೆಯ ಸಮಾಚಾರ ಕುತೂಹಲ ಮೂಡಿಸಿದೆ.