ಜೂನಿಯರ್ ಚಿರು ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಅವರು ಆಸ್ಪತ್ರೆಯ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಮಗು ನೋಡುತ್ತಿದ್ದಂತೆ ನನಗೆ ಅಣ್ಣನನ್ನೇ ನೋಡಿದಂತಾಯಿತು. ಸಮಸ್ತ ಕರ್ನಾಟಕದ ಜನರ ಆಶೀರ್ವಾದ ತಾಯಿ ಮತ್ತು ಮಗು ಮೇಲೆ ಇದೆ ಎಂದರು. ಅಣ್ಣ ಬದುಕಿದ್ದಾಗ ಮಗು ಹುಟ್ಟುವ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಚಿರಂಜೀವಿ ಶಾಲೆಯಲ್ಲಿ ತುಂಬ ತುಂಟನಿದ್ದ.

ಪೋಷಕರ ಸಭೆಯಲ್ಲಿ ಅವನ ವಿರುದ್ಧವೇ ಹೆಚ್ಚು ದೂರುಗಳು ಕೇಳಿಬರುತ್ತಿದ್ದವು. ಅದನ್ನು ಅಣ್ಣನಿಗೆ ಹೇಳಿದಾಗ ನನಗೂ ಮಗ ಹುಟ್ಟುತ್ತಾನೆ. ಅವನ ಮೇಲೂ ಶಾಲೆಯಲ್ಲಿ ಹೆಚ್ಚು ದೂರುಗಳು ಇರುತ್ತವೆ ಎಂದು ಉತ್ತರಿಸಿದ್ದು ನೆನಪಾಯಿತು ಎಂದರು.

ಮೇಘನಾರಾಜ್ ಅವರ ತಂದೆ ಹಿರಿಯ ನಟ ಸುಂದರ್‍ರಾಜ್ ಮಾತನಾಡಿ, ಕಳೆದ ನಾಲ್ಕೂವರೆ ತಿಂಗಳಿನಲ್ಲಿ ನಾವು ಪ್ರತಿ ಕ್ಷಣವೂ ನೋವಿನಲ್ಲೇ ಕಳೆದಿದ್ದೇವೆ. ರಾತ್ರಿ ಯಾಕಾದರೂ ಆಗುತ್ತೋ ಎಂಬ ಚಿಂತೆಯಾಗುತ್ತಿತ್ತು. ನಿದ್ದೆ ಬರುತ್ತಿರಲಿಲ್ಲ. ಒಂದೆಡೆ ರಾಜ್ಯದಲ್ಲಿ ಕೊರೊನಾ ಭಯ, ನೆರೆ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇವೆಲ್ಲವುಗಳ ಮಧ್ಯೆ ನಮ್ಮ ಕುಟುಂಬದಲ್ಲಿ ಬರಸಿಡಿಲಿನಂತೆ ಚಿರು ಸಾವು ಸಂಭವಿಸಿತು.

ನನ್ನ ಮಗಳು ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ನೋವು ತಿನ್ನುವುದನ್ನು ನೋಡಲಾಗುತ್ತಿರಲಿಲ್ಲ. ಇಂದು ನಮ್ಮ ಮನೆಗೆ ನಾಲ್ಕೂವರೆ ತಿಂಗಳ ನಂತರ ಖುಷಿಯ ಕ್ಷಣಗಳು ಬಂದಿವೆ. ನೋವಿಗೆ ಕೊಂಚ ವಿರಾಮ ಸಿಕ್ಕಿದೆ. ಮಗು ಹುಟ್ಟಿರುವುದು ಚಿರು ಮತ್ತೆ ಹುಟ್ಟಿ ಬಂದಂತಾಗಿದೆ ಎಂದರು.

ಮೇಘನಾ ರಾಜ್ ಅವರ ತಾಯಿ, ಹಿರಿಯ ನಟಿ ಪ್ರಮೀಳಾ ಜೋಷಾಯ್ ಮಾತನಾಡಿ, ಚಿರು ಸಾವಿನಿಂದ ನನಗೂ ತುಂಬ ನೋವಾಗಿತ್ತು. ಆದರೆ ನಾನೇ ಹೆದರಿ ಮೂಲೆಯಲ್ಲಿ ಕುಳಿತರೆ ಮಗಳನ್ನು ಸಂತೈಸುವರ್ಯಾರು ಎಂಬ ಕಾರಣಕ್ಕಾಗಿ ನನ್ನ ನೋವನ್ನು ಸಹಿಸಿಕೊಂಡು ಮಗಳಿಗೆ ಧೈರ್ಯ ಹೇಳುತ್ತಾ ಬಂದೆ.

ಆಕೆ ಚಿರು ಬೇಕು ಎಂದಾಗ ತಡೆಯಲಾಗದಷ್ಟು ದುಃಖವಾಗುತ್ತಿತ್ತು. ಆತ ಮತ್ತೆ ಹುಟ್ಟಿ ಬರುತ್ತಾನೆ ಧೈರ್ಯವಾಗಿರು ಎಂದು ಸಮಾಧಾನಪಡಿಸುತ್ತಿದ್ದೆ. ಇಂದು ಮಗುವಿನ ಮುಖ ನೋಡಿದರೆ ಚಿರು ಬಂದಂತಾಗಿದೆ ಎಂದಿದ್ದಾರೆ.

Facebook Comments