ಬರ್ತ್ ಡೇ ಖುಷಿಯಲ್ಲೇ ಮದುವೆ ದಿನಾಂಕ ಘೋಷಿಸಿದ ಧ್ರುವಸರ್ಜಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.6- ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್, ಹನುಮನ ಪರಮಭಕ್ತ ನಟ ಧ್ರುವಸರ್ಜಾ ಇಂದು 31 ನೆ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡ ಸಂಭ್ರಮದಲ್ಲೇ ಮದುವೆಯ ಡೇಟ್ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 2018ರ ಡಿಸೆಂಬರ್‍ನಲ್ಲಿ ಧ್ರುವಸರ್ಜಾ, ಪ್ರೇರಣಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಾದರೂ ಅವರ ಮದುವೆಯ ದಿನಾಂಕ ನಿಗದಿಯಾಗಿರಲಿಲ್ಲ, ಆದರೆ ಈಗ ನವೆಂಬರ್ 24 ಮತ್ತು 25 ರಂದು ಮದುವೆ ದಿನಾಂಕ ಫಿಕ್ಸ್ ಆಗಿದೆ ಎಂದು ಕುಟುಂಬ ಸದಸ್ಯರು ಘೋಷಿಸಿದ್ದಾರೆ.

ಅದ್ಧೂರಿ ಚಿತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಧ್ರುವಸರ್ಜಾ ನಂತರ ಬಹದ್ದೂರ್, ಭರ್ಜರಿ ಚಿತ್ರಗಳಿಂದ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಧ್ರುವಸರ್ಜಾರ ಪೊಗರು ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.  ಆ್ಯಕ್ಷನ್ ಪ್ರಿನ್ಸ್‍ಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯಿಂದಲೇ ಧ್ರುವನ ಮನೆ ಮುಂದೆ ನೆರೆದು ಹನುಮಂತನ ಸ್ಟೇಜ್ ನಿರ್ಮಿಸಿ ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದ್ದಾರೆ.

ತಮ್ಮ ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿದ ಧ್ರುವಸರ್ಜಾ ಅಭಿಮಾನಿಗಳ ಕೈ ಕುಲುಕಿ, ಪೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹುಟ್ಟುಹಬ್ಬದ ಸಂಭ್ರಮಪಟ್ಟರು.  ಹುಟ್ಟುಹಬ್ಬದ ಅಂಗವಾಗಿಯೇ ಧ್ರುವಸರ್ಜಾ ಅವರು ನಿನ್ನೆ ತಮ್ಮ ಟ್ವಿಟ್ಟರ್‍ನಲ್ಲಿ ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿ, ಅಕ್ಟೋಬರ್ 24ರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗುತ್ತದೆ ಎಂಬ ಸೂಚನೆ ನೀಡಿದ್ದಾರೆ.

ಬಿ.ಕೆ.ಗಂಗಾಧರ್ ನಿರ್ಮಿಸುತ್ತಿರುವ ಪೊಗರು ಚಗಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂಗಳಲ್ಲೂ ರಿಲೀಸ್ ಆಗಲಿದ್ದು, ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದರೆ, ರಶ್ಮಿಕಾಮಂದಣ್ಣ , ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ.  ಧ್ರುವಸರ್ಜಾನ ಹುಟ್ಟುಹಬ್ಬಕ್ಕೆ ಸೋದರ , ನಟ ಚಿರಂಜೀವಿಸರ್ಜಾ, ನಟಿ ಮೇಘನಾರಾಜ್ ಸೇರಿದಂತೆ ಚಿತ್ರರಂಗದ ಹಲವು ನಟರು, ತಂತ್ರಜ್ಞರು ಕೂಡ ಶುಭ ಕೋರಿದ್ದಾರೆ.

Facebook Comments